ADVERTISEMENT

ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸಾಗಾಟ–ಪೆಟ್ರೋಲ್ ಭತ್ಯೆಬೇಡುವ ಮಾರ್ಗಾಧಿಕಾರಿಗಳು

ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸಾಗಾಟ

ಪ್ರಕಾಶ ಕುಗ್ವೆ
Published 28 ಮಾರ್ಚ್ 2019, 19:45 IST
Last Updated 28 ಮಾರ್ಚ್ 2019, 19:45 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ದಾವಣಗೆರೆ: ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಮತ್ತು ಹಿಂತಿರುಗಿ ಒಯ್ಯುವ ಕರ್ತವ್ಯಕ್ಕೆ ನಿಯೋಜಿತರಾಗಿರುವ ಜಿಲ್ಲೆಯ ಕೆಲ ಮಾರ್ಗಾಧಿಕಾರಿಗಳು ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಂದ ಪೆಟ್ರೋಲ್‌ ಭತ್ಯೆ ಬೇಡುತ್ತಿದ್ದಾರೆ.

ಮಾರ್ಗಾಧಿಕಾರಿಗಳು ಪ್ರತಿ ನಿತ್ಯ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಖಜಾನೆಯಿಂದ ಪಡೆದು ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ತಲುಪಿಸಬೇಕು. ಹಾಗೆಯೇ, ಉತ್ತರ ಪತ್ರಿಕೆ ಬಂಡಲ್‌ಗಳನ್ನು ಕೇಂದ್ರಗಳಿಂದ ಹಿಂಪಡೆದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕು. ಈ ಕೆಲಸಕ್ಕೆ ಸರ್ಕಾರವೇ ಪೆಟ್ರೋಲ್‌ ಭತ್ಯೆಯನ್ನು ಪ್ರತಿ ಬಿಇಒ (ಕ್ಷೇತ್ರ ಶಿಕ್ಷಣಾಧಿಕಾರಿ)ಗಳ ಖಾತೆಗೆ ಹಾಕುತ್ತದೆ. ಆದರೆ, ಮಾರ್ಗಾಧಿಕಾರಿಗಳ ಮೂಲಕ ಬಿಇಒಗಳೇ ಭತ್ಯೆಯನ್ನು ಶಿಕ್ಷಕರಿಂದ ಕೇಳುತ್ತಿದ್ದಾರೆಂಬ ದೂರುಗಳು ಕೇಳಿಬಂದಿವೆ.

ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದ ಕಾರ್ಯ ಮುಗಿದ ಬಳಿಕ ಮಾರ್ಗಾಧಿಕಾರಿಗಳ ಜತೆ ಬಿಇಒ ಕೂಡ ಅದೇ ವಾಹನ ಹತ್ತಿಕೊಳ್ಳುತ್ತಾರೆ. ಈ ಅಧಿಕಾರಿಗಳ ತಂಡ ನಂತರ ಪರೀಕ್ಷಾ ಅಕ್ರಮ ನಡೆಯದಂತೆ ತಡೆಗಟ್ಟಲು ಪರಿಶೀಲನೆಗೆ ತಾಲ್ಲೂಕಿನಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ತೆರಳುತ್ತದೆ. ಆ ಸಂದರ್ಭದಲ್ಲಿ ಆ ಕೇಂದ್ರದ ಮುಖ್ಯ ಶಿಕ್ಷಕರು ಪ್ರತಿ ಶಾಲೆಯಿಂದ ತಲಾ ₹ 1 ಸಾವಿರದಂತೆ ಭತ್ಯೆ ನೀಡಬೇಕು. ‘ಇದು ಪೆಟ್ರೋಲ್ ಭತ್ಯೆ ಮಾತ್ರ’ ಎಂದು ಹೇಳಿ ವಾಹನ ಚಾಲಕರು ಶಿಕ್ಷಕರಿಂದ ವಸೂಲಿ ಮಾಡುತ್ತಿದ್ದಾರೆ.

ADVERTISEMENT

‘ಹಣ ಎಲ್ಲಿಂದ ಕೊಡೋಣ ಎಂದರೆ, ಎಸ್‌ಡಿಎಂಸಿಯಿಂದ ಕೊಡಿಸಿ ಎನ್ನುತ್ತಾರೆ. ಎಸ್‌ಡಿಎಂಸಿಯ ನೂರೆಂಟು ಪ್ರಶ್ನೆಗಳನ್ನು ಎದುರಿಸಲು ಧೈರ್ಯ ಇಲ್ಲದೆ ಕೈಯಿಂದಲೇ ಹಣ ಕೊಟ್ಟಿದ್ದೇನೆ’ ಎನ್ನುತ್ತಾರೆ ಹೊನ್ನಾಳಿ ತಾಲ್ಲೂಕಿನ ಶಾಲೆಯೊಂದರ ಮುಖ್ಯ ಶಿಕ್ಷಕರೊಬ್ಬರು.

‘ಪೆಟ್ರೋಲ್‌ ಭತ್ಯೆ ಅಷ್ಟೇ ಅಲ್ಲ. ಊಟ ಹಾಕಿಸಿ ಎನ್ನುವ ಬೇಡಿಕೆಯನ್ನೂ ಇಟ್ಟರು; ಅದಕ್ಕೂ ಕೈಯಿಂದಲೇ ಹಣ, ಊಟ ಹಾಕಿಸಿದೆ. ಎಕ್ಸಾಂ ಡ್ಯೂಟಿ ಮಾಡಬೇಕಾ? ಅಥವಾ ಅವರನ್ನು ಸಂಭಾಳಿಸಬೇಕಾ ಎನ್ನುವುದೇ ಗೊಂದಲ ಆಗಿದೆ’ ಎಂದು ಆ ಮುಖ್ಯ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ನಕಲಿಗೂ ಒತ್ತಡ

ಜಿಲ್ಲೆಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲಿಗೆ ಅಧಿಕಾರಿಗಳೇ ಪ್ರೋತ್ಸಾಹ ನೀಡುತ್ತಿದ್ದಾರೆಂಬ ದೂರುಗಳಿವೆ. ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗುವಷ್ಟು ಉತ್ತರಗಳನ್ನು ಹೇಳಿಕೊಡುವಂತೆ ಕೆಲವು ಶಿಕ್ಷಕರಿಗೆ ಅಧಿಕಾರಿಗಳು ಒತ್ತಡ ಹಾಕಿದ್ದಾರೆ.

‘ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಡುವ ಪದ್ಧತಿ ನಾನು ಈ ಹಿಂದೆ ಕೆಲಸ ಮಾಡಿದ ಜಿಲ್ಲೆಯಲ್ಲಿ ಇರಲಿಲ್ಲ. ನನಗಿದು ಹೊಸತು. ಅಧಿಕಾರಿಗಳ ಬೆದರಿಕೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಾನೂ ಈಗ ಅದೇ ಕೆಲಸವನ್ನು ಮಾಡಬೇಕಾಗಿ ಬಂದಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.