ADVERTISEMENT

ಜಾತಿ ಗಣತಿ ಜಾರಿ ವಿಚಾರದಲ್ಲಿ ಆತುರದ ನಿರ್ಧಾರ ಇಲ್ಲ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 10:31 IST
Last Updated 20 ಏಪ್ರಿಲ್ 2025, 10:31 IST
<div class="paragraphs"><p>ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ, ಒಕ್ಕಲಿಗರ ಸೇವಾ ಸಂಘದ ಕುಶಾಲಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.</p></div>

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ, ಒಕ್ಕಲಿಗರ ಸೇವಾ ಸಂಘದ ಕುಶಾಲಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

   

ಮಂಗಳೂರು: 'ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು. ಜಾತಿ ಗಣತಿ ಜಾರಿ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಇರುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಭಾನುವಾರ ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ADVERTISEMENT

‘ಕಾಂಗ್ರೆಸ್ ಎಲ್ಲ ಸಮುದಾಯಗಳನ್ನು ಸರಿಸಮನಾಗಿ ತೆಗೆದುಕೊಂಡು ಹೋಗಲು ಬದ್ಧವಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಉದ್ದೇಶವಿದೆ. ಯಾರಿಗಾದರೂ ಅನ್ಯಾಯ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬುವುದು ಪ್ರಮುಖ ಉದ್ದೇಶ. ಜೈನರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು’ ಎಂದು ಹೇಳಿದರು.

ವರದಿ ಅವೈಜ್ಞಾನಿಕ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ಈ ಸಮೀಕ್ಷೆಯಲ್ಲಿ ಶೇ 90ರಷ್ಟು ಜನರಿಂದ ಮಾಹಿತಿ ಪಡೆದಿದ್ದಾರೆ. ನಾವು ಈಗ ವರದಿಯ ಅಧ್ಯಯನ ಆರಂಭಿಸಿದ್ದೇವೆ. ಇದಕ್ಕೆ ಸಮಯ ಬೇಕು. ಈ ವಿಚಾರದಲ್ಲಿ ಯಾವುದೇ ಆತುರದ ತೀರ್ಮಾನವಿಲ್ಲ‘ ಎಂದು ತಿಳಿಸಿದರು.

ಭಾವನೆಗಿಂತ ಬದುಕು ಮುಖ್ಯ:

‘ಭಾವನೆಗಿಂತ ಬದುಕು ಮುಖ್ಯ. ಕರಾವಳಿ ಭಾಗದಲ್ಲಿ ನಮ್ಮ ಪಕ್ಷದಿಂದ ಕೇವಲ ಇಬ್ಬರು ಶಾಸಕರು ಗೆದ್ದಿದ್ದಾರೆ. ಈ ಭಾಗದಲ್ಲಿ ಎಲ್ಲರಿಗೂ ಒಳ್ಳೆಯದಾಗಬೇಕು. ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಆಡಳಿತದಲ್ಲಿದೆ. ಇಲ್ಲಿ ನಮ್ಮ ಪ್ರತಿನಿಧಿಗಳು ಬೇಕು. ಈ ಭಾಗದಲ್ಲಿ ಜನ ಬಿಜೆಪಿ ಗೆಲ್ಲಿಸಿದರು. ಆದರೂ ಈ ಭಾಗದ ಕುಟುಂಬಗಳಿಗೆ ಕಾಂಗ್ರೆಸ್‌ನಿಂದ ಸಹಾಯವಾಗುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ. ಇದನ್ನು ಜನರಿಗೆ ಮನದಟ್ಟು ಮಾಡಬೇಕು’ ಎಂದು ತಮ್ಮ ಪಕ್ಷದ ಕಾರ್ಯಕರ್ತರು, ನಾಯಕರಿಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.