ADVERTISEMENT

ತೀರ್ಪು ಒಪ್ಪಬೇಕು; ವಿಮರ್ಶೆ ಮಾಡಬಾರದು ಎಂದೇನಿಲ್ಲ: ದೇವನೂರು ಮಹಾದೇವ ಹೇಳಿಕೆ

ವಕೀಲ ಪ್ರಶಾಂತ್‌ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:17 IST
Last Updated 20 ಆಗಸ್ಟ್ 2020, 21:17 IST
ದೇವನೂರು ಮಹಾದೇವ
ದೇವನೂರು ಮಹಾದೇವ   

ಮೈಸೂರು: ‘ಸುಪ್ರೀಂ ಕೋರ್ಟ್‌ ತೀರ್ಪು ಒಪ್ಪಬೇಕು; ವಿಮರ್ಶೆ ಮಾಡಬಾರದು ಎಂದೇನಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡುವಂತೆ ಆಗ್ರಹಿಸಿ ಜನಾಂದೋಲನಗಳ ಮಹಾಮೈತ್ರಿ ಒಕ್ಕೂಟದಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸಂವಿಧಾನದ ಪ್ರತಿ ಸುಟ್ಟವರ ಬಗ್ಗೆಯಾಗಲೀ, ಸಂವಿಧಾನವನ್ನೇ ಬದಲಾಯಿಸುವುದಾಗಿ ಹೇಳಿದವರ ಬಗ್ಗೆಯಾಗಲೀ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು (ಸುಮೊಟೊ) ವಿಚಾರಣೆ ನಡೆಸದ ನ್ಯಾಯಾಲಯ, ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವುದರಲ್ಲೇ ವೃತ್ತಿ ಜೀವನ ಕಳೆದ, ನ್ಯಾಯಾಂಗದ ಘನತೆ ಉಳಿಸಲಿಕ್ಕಾಗಿ ಟ್ವೀಟ್‌ ಮಾಡಿದ್ದ ಪ್ರಶಾಂತ್‌ ಭೂಷಣ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡುವುದು ನ್ಯಾಯವೇ’ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್‌ನ ಈ ಧೋರಣೆಗೆ ತಮ್ಮ ವಿಷಾದವಿದೆ ಎಂದರು.

ADVERTISEMENT

‘ಸರ್ಕಾರ, ಅಧಿಕಾರಶಾಹಿ, ನ್ಯಾಯಾಂಗ, ಪತ್ರಿಕಾ ರಂಗ ಯಾವುದೂ ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸುತ್ತಿಲ್ಲ. ಸಾರ್ವಜನಿಕ ಹಿತಾಸಕ್ತಿ ಎಂಬುದು ಸಾರ್ವಜನಿಕರ ಕ್ಷೇತ್ರಕ್ಕೆ ಬಿದ್ದಿದೆ. ಅದನ್ನು ಕಾಪಾಡಿಕೊಳ್ಳಬೇಕು ಎಂದರೆ ಮುಂದೆ ಬರಬೇಕು. ಅದಕ್ಕೆ ಈ ಹೋರಾಟವೇ ನಾಂದಿಯಾಗಬೇಕು’ ಎಂದು ಹೇಳಿದರು.

‘ನಿರುದ್ಯೋಗ, ವಲಸೆ ಕಾರ್ಮಿಕರ ಸಮಸ್ಯೆ ಜೀವಂತವಿದೆ. ನೆರೆ–ಬರಕ್ಕೆ ಪರಿಹಾರ ವಿತರಿಸುವಲ್ಲೂ ತಾರತಮ್ಯವಿದೆ. ವ್ಯವಸ್ಥೆಗೆ ಇದನ್ನು ಎದುರಿಸಲಾಗುತ್ತಿಲ್ಲ. ಸಾರ್ವಜನಿಕರ ಹಿತಾಸಕ್ತಿ ಪರ ಧ್ವನಿ ಎತ್ತುವವರ ಧ್ವನಿ ಅಡಗಿಸುವ, ದಮನಿಸುವ ಯತ್ನ ನಡೆಸಿದೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.