ADVERTISEMENT

ಧರ್ಮಸ್ಥಳದಿಂದ 750 ಶಾಲೆಗಳಿಗೆ ಗೌರವ ಶಿಕ್ಷಕರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 18:52 IST
Last Updated 14 ಜುಲೈ 2022, 18:52 IST

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ನಿರ್ದೇಶನದಂತೆ ರಾಜ್ಯದ 750 ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ ಮಾಡಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳ ಸುಧಾರಣೆಗಾಗಿಯೇ 30 ವರ್ಷಗಳ ಹಿಂದೆ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ’ ಜಾರಿಗೆ ತರಲಾಗಿದೆ. ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಶಾಲಾ ಆವರಣ, ವಿದ್ಯುದ್ದೀಕರಣ, ಕುಡಿಯುವ ನೀರು, ರಂಗಮಂದಿರ, ಶಾಲಾ ಕಟ್ಟಡಗಳ ದುರಸ್ತಿ, ಡೆಸ್ಕ್-ಬೆಂಚ್‍ಗಳ ಒದಿಸುವುದು– ಮೊದಲಾದವುಗಳಿಗೆ ಈ ಕಾರ್ಯಕ್ರಮದ ಮೂಲಕ ಸಹಾಯಧನ ನೀಡಲಾಗುತ್ತಿದೆ. ಅದರಂತೆ ಇದುವರೆಗೆ ₹43.81 ಕೋಟಿ ಮೊತ್ತದ ಪೂರಕ ಸಹಾಯಧನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತವನ್ನು ಗಮನಿಸಿ ತೀರಾ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ. ಈ ಶಿಕ್ಷಕರ ಸೇವೆಯು ಗ್ರಾಮೀಣ ಶಾಲಾ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗುವುದನ್ನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ. ಈ ಶಿಕ್ಷಕರಿಗೆ ತಿಂಗಳ ಗೌರವಧನವನ್ನು ಸಂಸ್ಥೆಯ ವತಿಯಿಂದ ಪಾವತಿಸಲಾಗುತ್ತಿದ್ದು, ಇದಕ್ಕಾಗಿಯೇ ಸಂಸ್ಥೆಯಿಂದ ಇದುವರೆಗೆ ಒಟ್ಟು ₹11.05 ಕೋಟಿ ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.