ADVERTISEMENT

ಮಾಧ್ಯಮಗಳನ್ನೂ ಬೆದರಿಸವ ಮೋದಿ: ದಿನೇಶ್ ಗುಂಡೂರಾವ್ ಆರೋಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 10:49 IST
Last Updated 22 ಅಕ್ಟೋಬರ್ 2018, 10:49 IST
   

ಶಿವಮೊಗ್ಗ:ಕೇಂದ್ರ ಸರ್ಕಾರದ ಕಾರ್ಯವೈಖರಿ ವಿರುದ್ಧ ಧ್ವನಿ ಎತ್ತುವ ಮಾಧ್ಯಮಗಳನ್ನೂ ಹತ್ತಿಕ್ಕುವ ಕೆಲಸ ಪ್ರಧಾನಿ ನರೇಂದ್ರ ಮೋದಿ– ಅಮಿತ್‌ ಶಾ ಜೋಡಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಮೋದಿ ವಿರುದ್ಧ ಟೀಕೆ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿವೆ. ಹೆದರಿಕೆಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ವಿರೋಧಿಗಳಿಗೆ ಹಿಂಸೆ ನೀಡುವುದು, ಬ್ಲ್ಯಾಕ್‌ಮೇಲ್ ಮಾಡುವುದು ಅವರ ಪ್ರಮುಖ ಕೆಲಸ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಮಡಕೇರಿ ಸೇರಿದಂತೆ ಅತಿವೃಷ್ಟಿಗೆ ನಲುಗಿದ ಕರ್ನಾಟಕದ ನೆರವಿಗೆ ಮೋದಿ ಅವರು ನಯಾಪೈಸೆ ನೀಡಲಿಲ್ಲ. ದೆಹಲಿಗೆ ಹೋಗಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಬಿ.ಎಸ್. ಯಡಿಯೂರಪ್ಪ ಸೇರದಿಂತೆ ಬಿಜೆಪಿಯ ಯಾವ ಸಂಸದರೂ ಚಕಾರ ಎತ್ತಿಲ್ಲ. ಮೋದಿ ಕಂಡರೆ ಸಾಕು ಬಾಯಿ ತೆರೆಯುವುದೇ ಇಲ್ಲ ಎಂದು ಕುಟುಕಿದರು.

ADVERTISEMENT

ಶಿವಮೊಗ್ಗ ಲೋಕಸಭಾ ಕ್ಷೇತ್ರ ಯಡಿಯೂರಪ್ಪ ಕುಟುಂಬದ ಆಸ್ತಿಯೇ? ಅಪ್ಪ, ತಪ್ಪಿದರೆ ಮಗ ಜಾಹಗೀರು ಪಡೆದುಕೊಂಡಿದ್ದಾರೆಯೇ? ಈ ಬಾರಿ ಮಧು ಬಂಗಾರಪ್ಪ ಗೆಲುವು ನಿಶ್ಚಿತ. ಎರಡೂ ಪಕ್ಷಗಳು ಒಟ್ಟಾಗಿ ಅವರ ಪರ ನಿಲ್ಲುತ್ತೇವೆ.ಉಪ ಚುನಾವಣೆಯ ಹೊಂದಾಣಿಕೆ ಸಮ್ಮಿಶ್ರ ಸರ್ಕಾರದ ಸಂಬಂಧ ಮತ್ತಷ್ಟು ಗಟ್ಟಿ ಮಾಡಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ಮಣಿಸಲು ಈ ಚುನಾವಣೆ ಸಹಕಾರಿಯಾಗಿದೆ ಎಂದರು.

ಸಂಸದರ ಆದರ್ಶಗ್ರಾಮ ಬೈಂದೂರಿನ ಕೆರೋಡಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ನೂರಾರು ಕೋಟಿ ಖರ್ಚು ಮಾಡುವ ಭರವಸೆ ಈಡೇರಿಲ್ಲ. ಇದು ಅವರ ಅಭಿವೃದ್ಧಿಯ ಮಂತ್ರ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.