ADVERTISEMENT

ಐಎಎಸ್‌ಗೆ ಶಿಫಾರಸು: ರಾಜ್ಯ ಸರ್ಕಾರದಿಂದ ತಾರತಮ್ಯ?

ಅರ್ಹತೆ ಇಲ್ಲದಿದ್ದರೂ ಬಡ್ತಿಗೆ ಶಿಫಾರಸು l ಸರ್ಕಾರದ ನಡೆಗೆ ಅಸಮಾಧಾನ

ರಾಜೇಶ್ ರೈ ಚಟ್ಲ
Published 21 ಜುಲೈ 2022, 19:34 IST
Last Updated 21 ಜುಲೈ 2022, 19:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೈಕೋರ್ಟ್‌ ತೀರ್ಪಿನಂತೆ ಕೆಪಿಎಸ್‌ಸಿ ಅಂತಿಮವಾಗಿ ಪರಿಷ್ಕರಿಸಿದ್ದ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ಪಟ್ಟಿಯಲ್ಲಿ ಕೆಎಎಸ್‌ (ಉಪ ವಿಭಾಗಾಧಿಕಾರಿ) ವೃಂದಕ್ಕೆ 2019ರ ಜೂನ್‌ನಲ್ಲಿ ಸ್ಥಾನ ಪಲ್ಲಟಗೊಂಡ ಎಂಟು ಅಧಿಕಾರಿಗಳ ಪೈಕಿ ಒಬ್ಬರನ್ನು ಮಾತ್ರ ಎಸ್‌ಎಎಸ್‌ (ರಾಜ್ಯ ನಾಗರಿಕ ಸೇವೆ) ವರ್ಗದಿಂದ ಐಎಎಸ್‌ಗೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಡೆ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಎಎಸ್‌ನಿಂದ (ಕರ್ನಾಟಕ ನಾಗರಿಕ ಸೇವೆ) ಐವರಿಗೆ ಐಎಎಸ್‌, ಕೆಪಿಎಸ್‌ನಿಂದ (ಕರ್ನಾಟಕ ಪೊಲೀಸ್‌ ಸೇವೆ) ಏಳು ಅಧಿಕಾರಿಗಳಿಗೆ ಐಪಿಎಸ್‌ಗೆ ಬಡ್ತಿ ನೀಡಲು ರಾಜ್ಯ ಸರ್ಕಾರ 1:3 ಅನುಪಾತದಲ್ಲಿ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ, ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಕಳುಹಿಸಿತ್ತು. ಜುಲೈ 15ರಂದು ಈ ಸಂಬಂಧ ಆಯ್ಕೆ ಸಮಿತಿ ಸಭೆಯೂ ನಡೆದಿದೆ.

‘ಸರ್ಕಾರ ಈಗ ಶಿಫಾರಸು ಮಾಡಿರುವ ಅಧಿಕಾರಿಗಳ ಪಟ್ಟಿಯಲ್ಲಿ ಉಪವಿಭಾಗಾಧಿಕಾರಿ ವೃಂದಕ್ಕೆ ಸ್ಥಾನ ಪಲ್ಲಟಗೊಂಡಿದ್ದ ಪ್ರವೀಣ್‌ ಬಾಗೇವಾಡಿ ಅವರ ಹೆಸರೂ ಇದೆ. ಇವರು, ರಾಜ್ಯ ಸರ್ಕಾರದ ಪ್ರಭಾವಿ ಅಧಿಕಾರಿಯೊಬ್ಬರ ಸಂಬಂಧಿಯೂ ಹೌದು. 1998ನೇ ಸಾಲಿನ ಮೊದಲ ಆಯ್ಕೆ ಪಟ್ಟಿಯಲ್ಲಿ ತಹಶೀಲ್ದಾರ್‌ ಹುದ್ದೆಯಲ್ಲಿದ್ದ ಅವರು ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಉಪವಿಭಾಗಾಧಿಕಾರಿ ವೃಂದಕ್ಕೆ ಆಯ್ಕೆಯಾಗಿದ್ದರು. ರಾಜ್ಯ ನಾಗರಿಕ ಸೇವೆ ವರ್ಗದಿಂದ ಐಎಎಸ್‌ಗೆ ಅರ್ಹತೆ ಪಡೆಯಲು ಕೆಎಎಸ್‌ ವೃಂದದಲ್ಲಿ ಕನಿಷ್ಠ ಎಂಟು ವರ್ಷ ಕರ್ತವ್ಯ ಸಲ್ಲಿಸಿರಬೇಕು. ಆದರೆ, ಈ ವೃಂದದಲ್ಲಿ ಕೇವಲ ಮೂರು ವರ್ಷ ಕರ್ತವ್ಯ ಸಲ್ಲಿಸಿದ್ದವರ ಹೆಸರನ್ನು ಈ ವರ್ಗದಿಂದ ಶಿಫಾರಸು ಮಾಡಿರುವುದು ನಿಯಮಬಾಹಿರ ಅಲ್ಲವೇ’ ಎನ್ನುವುದು ಕೆಲವು ಅಧಿಕಾರಿಗಳ ಪ್ರಶ್ನೆ.

ADVERTISEMENT

1998ನೇ ಸಾಲಿನಲ್ಲಿ ಪ್ರವೀಣ್‌ ಅವರಂತೆ ತಹಶೀಲ್ದಾರ್‌ ಹುದ್ದೆಗೆ ಆಯ್ಕೆಯಾದವರೂ ಉಪ ವಿಭಾಗಾಧಿಕಾರಿಯಾಗಿ ಬಡ್ತಿ ಪಡೆದಿದ್ದಾರೆ. ತಹಶೀಲ್ದಾರ್‌ ಹುದ್ದೆಯಿಂದ ಉಪವಿಭಾಗಾಧಿಕಾರಿಯಾದ ಮತ್ತು ಪರಿಷ್ಕೃತ ಪಟ್ಟಿಯಂತೆ ಉಪ ವಿಭಾಗಾಧಿಕಾರಿಯಾಗಿ ಪ್ರವೀಣ್‌ ಅವರು ಸಲ್ಲಿಸಿದ ಸೇವಾ ಅವಧಿಯನ್ನು ಪರಿಗಣಿಸಿ, ಇದೀಗ ರಾಜ್ಯ ನಾಗರಿಕ ಸೇವೆಯಿಂದ ಐಎಎಸ್‌ಗೆ ಶಿಫಾರಸು ಮಾಡಲಾಗಿದೆ.

‘ತಹಶೀಲ್ದಾರ್‌ ಹುದ್ದೆ ಅವಧಿಯನ್ನು ಪರಿಗಣಿಸಿ ಐಎಎಸ್‌ಗೆ ಶಿಫಾರಸು ಮಾಡುವುದಾದರೆ ನಮ್ಮ ಹೆಸರನ್ನು ಪರಿಗಣಿಸಬೇಕಿತ್ತು. ಕೆಎಎಸ್‌ ವೃಂದಕ್ಕೆ ಸ್ಥಾನಪಲ್ಲಟಗೊಂಡ ಒಂದೂವರೆ ವರ್ಷದಲ್ಲೇ ಪ್ರವೀಣ್‌ ಅವರನ್ನು ಐಎಎಸ್‌ಗೆ ಯಾವ ಮಾನದಂಡದಲ್ಲಿ ಶಿಫಾರಸು ಮಾಡಲಾಗಿದೆ?’ ಎಂದು ಪ್ರವೀಣ್ ಅವರ ಜೊತೆಗೇ ಉಪವಿಭಾಗಾಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದ ತಹಶೀಲ್ದಾರ್‌ಗಳು ಪ್ರಶ್ನಿಸಿದ್ದಾರೆ.

‘ಇದು ಯಾವ ನ್ಯಾಯ?’

‘ಪ್ರವೀಣ್‌ ಅವರನ್ನು ಐಎಎಸ್‌ಗೆ ಶಿಫಾರಸು ಮಾಡುವುದಾದರೆ, ಅವರ ಜೊತೆಗೇ ಸ್ಥಾನಪಲ್ಲಟ ಹೊಂದಿದದವರು ಏನು ತಪ್ಪು ಮಾಡಿದ್ದೇವೆ? ಹಿಂದೆಯೇ ಉಪ ವಿಭಾಗಾಧಿಕಾರಿ ಆಗಬೇಕಿದ್ದ ನಾವು, ಕೆಪಿಎಸ್‌ಸಿ ತಪ್ಪಿನಿಂದಾಗಿ ಅವಕಾಶ ವಂಚಿತರಾಗಿದ್ದೆವು. ಐಎಎಸ್‌ಗೆ ಶಿಫಾರಸು ಮಾಡುವ ವೇಳೆ ತಾರತಮ್ಯ ಮಾಡಲಾಗಿದೆ. ಈಗ ನಮ್ಮ ಹೆಸರು ಕೈಬಿಟ್ಟಿರುವುದು ಯಾವ ನ್ಯಾಯ’ ಎಂದು ಕೆಲ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

***

ಸಂಪೂರ್ಣ ಅರ್ಹತೆ ಆಧರಿಸಿ, ಶೇ 100ರಷ್ಟು ನಿಯಮ ಪಾಲಿಸಿಯೇ ಅಧಿಕಾರಿಗಳ ಹೆಸರು ಶಿಫಾರಸು ಮಾಡಿದ್ದೇವೆ. ಆಯ್ಕೆಯಾದವರ ಪಟ್ಟಿ ಯುಪಿಎಸ್‌ಸಿಯಿಂದ ಬರಲಿ ನೋಡೋಣ

–ವಂದಿತಾ ಶರ್ಮ, ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.