ADVERTISEMENT

ಗ್ರಾಮ ಒನ್ ಕಾರ್ಯಕರ್ತರಿಗೆ ಜಿಲ್ಲಾವಾರು ಪ್ರಶಸ್ತಿ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:30 IST
Last Updated 22 ಫೆಬ್ರುವರಿ 2023, 22:30 IST
ಗ್ರಾಮ ಒನ್ ಕಾರ್ಯಕರ್ತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೆಕ್ ವಿತರಿಸಿದರು. ಶಾಸಕ ಅರವಿಂದ ಬೆಲ್ಲದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ವಿ.ಪೊನ್ನುರಾಜ್ ಇದ್ದರು
ಗ್ರಾಮ ಒನ್ ಕಾರ್ಯಕರ್ತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೆಕ್ ವಿತರಿಸಿದರು. ಶಾಸಕ ಅರವಿಂದ ಬೆಲ್ಲದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ವಿ.ಪೊನ್ನುರಾಜ್ ಇದ್ದರು   

ಬೆಂಗಳೂರು: ‘ಗ್ರಾಮ ಒನ್ ಕಾರ್ಯಕರ್ತರಿಗೆ ಜಿಲ್ಲಾವಾರು ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗ್ರಾಮ ಒನ್ ಯೋಜನೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ತಂತ್ರಜ್ಞಾನ ಮತ್ತು ಸೇವಾ ಮನೋಭಾವ ಜೊತೆಗೂಡಿದರೆ ಗ್ರಾಮೀಣ ಪ್ರದೇಶ ಜನರಿಗೆ ಸರ್ಕಾರದ ಸವಲತ್ತುಗಳನ್ನು ಸುಲಭವಾಗಿ ತಲುಪಿಸಬಹುದು. ಇದನ್ನು ಗ್ರಾಮ ಒನ್ ಕಾರ್ಯಕರ್ತರು ನಿರೂಪಿಸಿದ್ದಾರೆ’ ಎಂದರು.

‘ಸರ್ಕಾರಿ ಕಚೇರಿಗಳನ್ನು ಕಾಗದ ರಹಿತ ಮಾಡಲು ಸರ್ಕಾರ ನಿರ್ಧರಿಸಿದ್ದು, ಪ್ರಯೋಗಿಕವಾಗಿ ಆರು ತಾಲ್ಲೂಕುಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರ ಭಾಗವಾಗಿ ನಾಡಕಚೇರಿಗಳನ್ನೂ ಕಾಗದ ರಹಿತ ಮಾಡಲಾಗುವುದು. ಸರ್ವರ್ ಸಾಮರ್ಥ್ಯ ಹೆಚ್ಚಿಸಲು ಅನುಮತಿ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತ ಸುಧಾರಣೆಯಾದರೆ ಯಶಸ್ಸು ಸಾಧ್ಯ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸಬಹುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಜಾರಿಯಲ್ಲಿದೆ. ಗ್ರಾಮ ಒನ್ ಕೇಂದ್ರ‌ದಿಂದ ಬಂದ ಅರ್ಜಿಗಳು ವಿಲೇವಾರಿ ಆಗಲು ವಿಳಂಬವಾದರೆ ತಹಶೀಲ್ದಾರ್ ಕಚೇರಿಗೂ ಇದಕ್ಕೂ ವ್ಯತ್ಯಾಸ ಇರುವುದಿಲ್ಲ. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಕೆಲಸಮಾಡಬೇಕು ಎಂದರು.

‘ಗ್ರಾಮ ಒನ್ ವ್ಯವಸ್ಥೆಯಲ್ಲಿ ಬಹಳಷ್ಟು ಜನರ ಪರಿಶ್ರಮವಿದೆ. ನಿಮ್ಮ ನಿತ್ಯದ ಕೆಲಸದೊಂದಿಗೆ ಕನಿಷ್ಠ ಶೇ 10ರಷ್ಟು ಹೆಚ್ಚು ಕೆಲಸ ಮಾಡಲು ಪ್ರಯತ್ನಿಸಿ. ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ಮಾನವೀಯತೆಯಿಂದ ಸ್ಪಂದಿಸಿ, ಅವರಿಗೆ ಸೇವೆ ನೀಡಲು ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಗ್ರಾಮ ಕಾರ್ಯಕರ್ತರ ಕಷ್ಟ–ಸುಖಗಳನ್ನು ಆಲಿಸಿದ ಮುಖ್ಯಮಂತ್ರಿ, ಅವರೊಂದಿಗೆ ಕೆಲ ಸಮಯ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.