ಡಿಕೆಶಿ
ಬೆಂಗಳೂರು: ‘ಎಚ್‌ಎಎಲ್ ಅನ್ನು ಯಾವುದೇ ಬಿಜೆಪಿ ಸರ್ಕಾರ ನೀಡಿಲ್ಲ. ಅದನ್ನು ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲು ನಾವು ಬಿಡುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಎಚ್‌ಎಎಲ್ ಅನ್ನು ಬೆಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ ಎಂಬ ವರದಿಯ ಬಗ್ಗೆ ಶಿವಕುಮಾರ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಎಚ್‌ಎಎಲ್ ಕೇವಲ ಒಂದು ಉದ್ಯಮ ಅಲ್ಲ. ಅದೊಂದು ರಾಷ್ಟ್ರೀಯ ಸಂಪತ್ತು. ಅದರ ಸ್ಥಾಪನೆ ಹಿಂದೆ ಜವಾಹರ ಲಾಲ್ ನೆಹರೂ ಮತ್ತು ಕೃಷ್ಣರಾಜ ಒಡೆಯರ್ ಅವರ ಶ್ರಮವಿದೆ. ಮೈಸೂರು ಸಂಸ್ಥಾನದ ಸಹಕಾರದೊಂದಿಗೆ 1940ರಲ್ಲಿ ಎಚ್‌ಎಎಲ್ ಸ್ಥಾಪಿಸಲಾಗಿತ್ತು. ಬೆಂಗಳೂರು ದೇಶದ ವೈಮಾನಿಕ ಉದ್ಯಮದ ತೊಟ್ಟಿಲು. ಎಚ್‌ಎಎಲ್ ಅನ್ನು ಇಲ್ಲಿಂದ ಸ್ಥಳಾಂತರಿಸುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
‘ಬೇರೆ ರಾಜ್ಯವು ಉದ್ಯಮ ಸ್ಥಾಪನೆಗೆ ಮನವಿ ಸಲ್ಲಿಸಬಾರದು ಎಂದಲ್ಲ. ಆದರೆ ಒಂದೆಡೆ ಸ್ಥಾಪನೆಯಾಗಿ, ಗಟ್ಟಿಯಾಗಿ ನೆಲೆಯೂರಿರುವ ಸಂಸ್ಥೆಯನ್ನು ಸ್ಥಳಾಂತರಿಸುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿರುವ ರಾಷ್ಟ್ರೀಯ ಸ್ವತ್ತನ್ನು ನಮ್ಮ ಸರ್ಕಾರ ಕಾಪಾಡಿಕೊಳ್ಳಲಿದೆ’ ಎಂದಿದ್ದಾರೆ.
‘ಎಚ್‌ಎಎಲ್‌ನ ಕಾರ್ಯಾಚರಣೆ ವಿಸ್ತರಣೆಗೆ ತುಮಕೂರು ಬಳಿ ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರವು ಜಮೀನು ನೀಡಿದೆ. ಅತ್ಯವಿದ್ದರೆ ಇನ್ನೂ ಹೆಚ್ಚಿನ ಜಮೀನು ಮತ್ತು ಸಹಕಾರ ನೀಡಲಿದೆ. ಎಚ್‌ಎಎಲ್ ಅನ್ನು ಸ್ಥಳಾಂತರಿಸುವ ಬಗ್ಗೆ ಬಿಜೆಪಿ ಸಂಸದರು, ಕೇಂದ್ರಸಚಿವರು ಈವರೆಗೆ ಏಕೆ ಮಾತನಾಡಿಲ್ಲ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.