ADVERTISEMENT

ಸೇವೆಗೆ ಸರ್ಕಾರಿ ಆಸ್ಪತ್ರೆ ಅಣಿ|ರಜೆ ಮೇಲೆ ತೆರಳದಂತೆ ವೈದ್ಯಕೀಯ ಸಿಬ್ಬಂದಿಗೆ ಆದೇಶ

ಕೋಲ್ಕತ್ತದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:12 IST
Last Updated 16 ಜೂನ್ 2019, 20:12 IST
   

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸೋಮವಾರ (ಜೂನ್‌ 17) ಕೆಲಸ ನಿರ್ವಹಿಸಬೇಕು. ರಜೆ ಮೇಲೆ ತೆರಳಬಾರದು ಎಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಾಗಿ ಆದೇಶಿಸಿದೆ.

ಕೋಲ್ಕತ್ತದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೆಂಬಲಕ್ಕೆ ನಿಂತಿರುವ ಭಾರತೀಯ ವೈದ್ಯಕೀಯ ಸಂಘವು ಸೋಮವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಂಘ ಕರೆ ನೀಡಿದೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ, ವೈದ್ಯರಿಗೆ ರಜೆ ನೀಡದೆ ಕರ್ತವ್ಯ ನಿರ್ವಹಿಸುವಂತೆ ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮತ್ತು ಜಿಲ್ಲಾಶಸ್ತ್ರ ಚಿಕಿತ್ಸಕರಿಗೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ADVERTISEMENT

‘ಮುಷ್ಕರ ಸಾಂಕೇತಿಕವಾಗಿರಲಿ’ ಎಂದು ವೈದ್ಯರಿಗೆ ಮನವಿ ಮಾಡಿರುವ ಆರೋಗ್ಯ ಸಚಿವ ಶಿವಾನಂದ ಪಾಟೀಲ, ‘ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಗಮನ ಹರಿಸಬೇಕು’ ಎಂದು ಕೋರಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ವ್ಯತ್ಯಯವಾದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಆ್ಯಂಬುಲೆನ್ಸ್‌ಗಳನ್ನು ಸಜ್ಜಾಗಿ ಇಟ್ಟುಕೊಳ್ಳಬೇಕು. ರೋಗಿಗಳ ರಕ್ಷಣೆಗೆ ಕೂಡಲೇ ಧಾವಿಸಲು ಅಣಿಯಾಗಿರುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.