ADVERTISEMENT

ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಏಕಾಂಗಿಯಾಗಿ ಬಂದ 5 ವರ್ಷದ ಬಾಲಕ

​ಪ್ರಜಾವಾಣಿ ವಾರ್ತೆ
Published 26 ಮೇ 2020, 6:41 IST
Last Updated 26 ಮೇ 2020, 6:41 IST
ದೆಹಲಿ ವಿಮಾನ ನಿಲ್ದಾಣದಿಂದ ಒಬ್ಬನೇ ಬಂದ ಬಾಲಕ
ದೆಹಲಿ ವಿಮಾನ ನಿಲ್ದಾಣದಿಂದ ಒಬ್ಬನೇ ಬಂದ ಬಾಲಕ   

ಬೆಂಗಳೂರು: ದೇಶೀಯ ವಿಮಾನ ಸಂಚಾರ ಆರಂಭವಾಗುತ್ತಿದ್ದಂತೆ ಸೋಮವಾರ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸೇರಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವಿಶೇಷ ಅತಿಥಿಯೊಬ್ಬರು ಅಚ್ಚರಿ ಮೂಡಿಸಿದರು. ದೆಹಲಿಯಿಂದ ಒಬ್ಬನೇ ವಿಮಾನದಲ್ಲಿ ಬಂದಿಳಿದ ಐದು ವರ್ಷದ ಈ ಅತಿಥಿಯ ಹೆಸರುವಿಹಾನ್‌ ಶರ್ಮಾ.

ಬಾಲಕನನ್ನು ಕರೆದೊಯ್ಯಲು ಅವನ ತಾಯಿ ನಿಲ್ದಾಣಕ್ಕೆ ಬಂದಿದ್ದರು. ‘ಅಜ್ಜಿ ಮತ್ತು ತಾತಾ ವಿಹಾನ್‌ನನ್ನು ಎರಡು ತಿಂಗಳ ಹಿಂದೆ ದೆಹಲಿಗೆ ಕರೆದೊಯ್ದಿದ್ದರು. ಬೆಂಗಳೂರಿಗೆ ಮರಳುವ ವೇಳೆಗೆ ಲಾಕ್‌ಡೌನ್‌ ಘೋಷಿಸಲಾಯಿತು. 60 ವರ್ಷ ಮೇಲ್ಪಟ್ಟವರಿಗೆ ವಿಮಾನ ಸಂಚಾರ ನಿರ್ಬಂಧಿಸಲಾಗಿರುವುದರಿಂದ ಅಜ್ಜಿ, ತಾತಾ ಬರಲಿಲ್ಲ. ಅನಿವಾರ್ಯವಾಗಿ ವಿಹಾನ್‌ ಒಬ್ಬನನ್ನೇ ಕರೆಸಬೇಕಾಯಿತು’ ಎಂದು ಅವನ ತಾಯಿ ಮಂಜೀಶ್‌ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

60 ದಿನಗಳ ನಂತರ ಮಗನನ್ನು ಕಂಡ ತಾಯಿ, ಅವನು ವಿಮಾನದಿಂದ ಇಳಿದು ನಿಲ್ದಾಣದೊಳಗೆ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದರು. ಹಳದಿ ಜಾಕೆಟ್‌, ಅದೇ ಬಣ್ಣದ ಮಾಸ್ಕ್‌ ಧರಿಸಿದ್ದ ವಿಹಾನ್, ಕೈಯಲ್ಲಿ ‘ವಿಶೇಷ ಕೆಟಗರಿ’ ಫಲಕ ಹಿಡಿದುಕೊಂಡಿದ್ದ. ಕೆಐಎ ಕೂಡ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಹಾನ್‌ಗೆ ಸ್ವಾಗತ ಕೋರಿ ಟ್ವೀಟ್‌ ಮಾಡಿತು. ಅವನನ್ನು ‘ಹೋಮ್‌ ಕ್ವಾರಂಟೈನ್‌’ಗೆ ಕಳುಹಿಸಲಾಯಿತು.

ADVERTISEMENT

ಕ್ವಾರಂಟೈನ್‌ ಕಿತ್ತಾಟ:ಕೆಂಪು ವಲಯದ ರಾಜ್ಯಗಳಿಂದ ಬಂದ ಪ್ರಯಾಣಿರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಯಿತು. ಕ್ವಾರಂಟೈನ್‌ಗೆ ಒಪ್ಪದ ಕೆಲವರು ಪೊಲೀಸರು ಮತ್ತು ಬಿಐಎಎಲ್‌ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕ್ವಾರಂಟೈನ್‌ಗೆ ಒಪ್ಪದೆ ಪರಾರಿಯಾಗಲು ಯತ್ನಿಸಿದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.