ADVERTISEMENT

ಅಂಕಗಳ ಆಧಾರದಲ್ಲಿ ಬುದ್ಧಿವಂತಿಕೆ ಅಳೆಯುವುದು ಸಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 5:06 IST
Last Updated 10 ಮಾರ್ಚ್ 2023, 5:06 IST
   

ಬೆಂಗಳೂರು: ‘ಮಕ್ಕಳ ಸಾಮರ್ಥ್ಯ, ವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನು ಅವರ ಅಂಕಗಳ ಮೇಲೆ ಅಳೆಯುತ್ತಿದ್ದೇವೆ’ ಎಂಬ ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ‘ಮಕ್ಕಳು ಪಡೆಯುವ ಅಂಕಗಳ ಆಧಾರದಲ್ಲಿ ಅವರ ಬುದ್ಧಿವಂತಿಕೆ ಅಳೆಯಲು ಸಾಧ್ಯವೇ’ ಎಂದು ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದೆ.

2022ರ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನ ಬದಲಾಯಿಸುವ (ಬೋರ್ಡ್ ಪರೀಕ್ಷೆ) ಸಂಬಂಧದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ (ಕುಸ್ಮಾ), ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಮತ್ತು ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ (ಒಯುಆರ್‌ಎಸ್) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಕೊರೋನಾ ಸಂದರ್ಭದಲ್ಲಿ ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಇದನ್ನು ವೃದ್ಧಿಸಲು 5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ. ಮಕ್ಕಳ ಬುದ್ಧಿವಂತಿಕೆ ಅಳೆಯಲು ಈ ವ್ಯವಸ್ಥೆ ಜಾರಿ ಮಾಡಲಾಗಿದೆ’ ಎಂಬ ವಿವರಣೆ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕೆಲವು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಮಕ್ಕಳು ಶೇ 90ರಷ್ಟು ಹೆಚ್ಚು ಅಂಕಗಳನ್ನು ಪಡೆಯದೇ ಹೋದಲ್ಲಿ ಅಂತಹವರನ್ನು ಬೇರೊಂದು ಶಾಲೆಗಳಿಗೆ ಕಳುಹಿಸಲಾಗುತ್ತಿದೆ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ. ಮಕ್ಕಳ ಬುದ್ಧಿವಂತಿಕೆಯನ್ನು ಅಳೆಯಲು ಈ ವಿಧಾನ ಸರಿಯಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

‘ನಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ಅವರು ಪಡೆದ ಅಂಕಗಳ ಆಧಾರದಲ್ಲಿ ಅಳೆಯುವುದಾದರೆ ಅತ್ಯುತ್ತಮ ರ‍್ಯಾಂಕ್ ಪಡೆದ ಹಲವು ವಕೀಲರು ಇಂದು ಕೋರ್ಟ್ ಕಾರಿಡಾರ್‌ನಲ್ಲಿ ಖಾಲಿ ಕೈಯಲ್ಲಿ ಓಡಾಡುತ್ತಿದ್ದಾರೆ! ಚಿನ್ನದ ಪದಕ ಪಡೆದ ಎಷ್ಟೋ ವೈದ್ಯರ ಬಳಿ ರೋಗಿಗಳೇ ಇಲ್ಲವಾಗಿದ್ದಾರೆ. ಗೋಲ್ಡ್ ಮೆಡಲ್ ಪಡೆದ ಎಂಜಿನಿಯರ್‌ಗಳು ನಿರ್ಮಿಸುವ ಕಟ್ಟಡಗಳು ಕುಸಿಯುತ್ತಿವೆ...!!’ ಎಂದು ಕುಟುಕಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿದೆ.

ಅರ್ಜಿಯಲ್ಲಿ ಏನಿದೆ?: 2022-23ರ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ (ಬೋರ್ಡ್ ಪರೀಕ್ಷೆ) 2022ರ ಡಿಸೆಂಬರ್ 12ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.