ADVERTISEMENT

DNP ಆತಂಕ ಪಡಬೇಡಿ, ಆತ್ಮವಿಶ್ವಾಸವಿರಲಿ: ಕೋವಿಡ್ ಗೆದ್ದ ಯುವಕನ ಮಾತು

ಎಂ.ಮಹೇಶ
Published 17 ಜುಲೈ 2020, 19:30 IST
Last Updated 17 ಜುಲೈ 2020, 19:30 IST
ಹೃಷಿಕೇಶ್ ದೇಶಪಾಂಡೆ
ಹೃಷಿಕೇಶ್ ದೇಶಪಾಂಡೆ   

ಬೆಳಗಾವಿ: ‘ಕೋವಿಡ್–19 ಬಂದಿರುವುದು ದೃಢವಾಯಿತೆಂದು ಭಯ ಪಡುವ ಅಗತ್ಯವಿಲ್ಲ. ಅದೊಂದು ಸಾಮಾನ್ಯ ಜ್ವರವೇ ಸರಿ. ಸೂಕ್ತ ಚಿಕಿತ್ಸೆ ಪಡೆದರೆ ಬೇಗ ಗುಣಮುಖವಾಗಬಹುದು. ಆದರೆ, ಯಾವುದೇ ಕಾರಣಕ್ಕೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲೇಬಾರದು’.

– ಕೋವಿಡ್ ಗೆದ್ದು ಇಲ್ಲಿನ ಕೆಎಲ್‌ಇ ಆಸ್ಪತ್ರೆಯಿಂದ ಈಚೆಗೆ ಬಿಡುಗಡೆಯಾಗಿ ಮನೆಗೆ ತೆರಳಿರುವ ಅಥಣಿಯ ಋಷಿಕೇಶ್ ದೇಶಪಾಂಡೆ (30) ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಅನುಭವದ ಮಾತುಗಳಿವು.

‘ನಮ್ಮದು ಚಿನ್ನಾಭರಣ ಅಂಗಡಿ ಇದೆ. ಲಾಕ್‌ಡೌನ್‌ ಆದ ನಂತರ ಹೊರ ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಹೋಗಿರಲಿಲ್ಲ. ಲಾಕ್‌ಡೌನ್‌ ತೆರವಾದ ನಂತರ ಅಂಗಡಿಯಲ್ಲಷ್ಟೇ ಇರುತ್ತಿದ್ದೆ. ಹೀಗಾಗಿ, ಹೇಗೆ ಸೋಂಕು ಬಂದಿತೆಂದು ಸ್ಪಷ್ಟವಾಗಿ ತಿಳಿಯಲಿಲ್ಲ. ಜ್ವರ ಇತ್ತು. ಗಂಟಲು ಕೆರೆತ ಆಗುತ್ತಿತ್ತು. ಕಫ ಆಗಿತ್ತು ಹಾಗೂ ತಲೆಭಾರ ಎನಿಸುತ್ತಿತ್ತು. ಆರೋಗ್ಯ ಇಲಾಖೆಯವರು ಬಂದು ತಪಾಸಣೆ ನಡೆಸುತ್ತಾರೆ ಎನ್ನುವುದನ್ನು ಕಾಯದೆ ನಾನೇ ಹೋಗಿ ಪರೀಕ್ಷೆಗೆ ಒಳಗಾಗಿದ್ದೆ. ಪಾಸಿಟಿವ್ ಬರುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಾಗಿದ್ದೆ’.

ADVERTISEMENT

‘ಈ ಸೋಂಕು ಹೆದರಿದರೆ ಹೆದರಿಸುತ್ತದೆ. ಹೆದರಿಸಿದರೆ ಓಡಿ ಹೋಗುತ್ತದೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಚೆನ್ನಾಗಿ ನೋಡಿಕೊಂಡರು. ಪ್ರೀತಿ–ವಾತ್ಸಲ್ಯದಿಂದ ಕಂಡರು. ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್‌ ಧರಿಸಿಕೊಂಡು ಬಂದು ಔಷಧಿ ನೀಡುತ್ತಿದ್ದರು; ಶುಶ್ರೂಷೆ ಮಾಡುತ್ತಿದ್ದರು. ವಾರ್ಡ್‌ನಲ್ಲಿ ಸ್ವಚ್ಛತೆಯನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತಿದ್ದುದ್ದರಿಂದ ಉತ್ತಮ ವಾತಾವರಣ ಇತ್ತು. ಪ್ಯಾರಸಿಟಮಲ್‌ ಮಾತ್ರೆ, ವಿಟಮಿನ್‌ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಅದರಂತೆ ನಾನು ಪಾಲಿಸಿದೆ’.

‘ಕೋವಿಡ್ ಬಂದರೆ ವಿಶ್ರಾಂತಿ ಬಹಳ ಮುಖ್ಯ. ಮಾನಸಿಕವಾಗಿ ಧೈರ್ಯ ತಂದುಕೊಳ್ಳಬೇಕು. ವಿಶೇಷವಾಗಿ ಟಿವಿಗಳಲ್ಲಿ ಬರುವ ನ್ಯೂಸ್‌ಗಳನ್ನು ನೋಡಬಾರದು. ಅತಿರಂಜಿತ, ವೈಭವೀಕರಿಸುವ ಹಾಗೂ ಭಯ ಉಂಟು ಮಾಡುವ ಟಿವಿ ವರದಿಗಳಿಗೆ ಕಿವಿಕೊಡಬಾರದು. ನಾನು ಸುದ್ದಿ ವಾಹಿನಿಗಳಿಂದ ದೂರ ಇದ್ದದ್ದು ಒಳ್ಳೆಯದಾಯಿತು. ಗಾಬರಿ ಇಲ್ಲದೇ ಇದ್ದಿದ್ದರಿಂದ ಬೇಗ ಗುಣಮುಖವಾಗಲು ಸಾಧ್ಯವಾಯಿತು. ವೈದ್ಯರ ಸಲಹೆಯಂತೆ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದು, ವಿಶ್ರಾಂತಿ ಪಡೆಯುತ್ತಿದ್ದೇನೆ’.

‘ಜನರು ಕೋವಿಡ್‌ನಿಂದ ದೂರ ಇರಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಯಂಪ್ರೇರಿತವಾಗಿ ತಪಾಸಣೆಗೆ ಒಳಗಾಗಿ ಭಯ ನಿವಾರಿಸಿಕೊಳ್ಳಬೇಕು. ಹಾಗೊಂದು ವೇಳೆ ಸೋಂಕಿದ್ದಲ್ಲಿ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡರೆ ಬೇಗ ಗುಣಮುಖವಾಗಬಹುದು ಎನ್ನುವುದು ನನ್ನ ಅಭಿಪ್ರಾಯ’ ಎನ್ನುತ್ತಾರೆ ಅವರು.

‘ಕೋವಿಡ್ ಬಂದವರನ್ನು ಅಪರಾಧಿಗಳಂತೆ ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕು. ಅವರಿಗೆ ಗಾಬರಿ ಆಗುವಂತಹ ನಡವಳಿಕೆಯನ್ನು ಯಾರೂ ತೋರಬಾರದು. ಅವರಿಗೆ ಆತ್ಮಸ್ಥೈರ್ಯ ತುಂಬುವಂತಹ ವಾತಾವರಣ ನಿರ್ಮಾಣವಾಗಬೇಕು’ ಎಂದು ಅನಿಸಿಕೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.