ADVERTISEMENT

ಮುಖ್ಯಮಂತ್ರಿಗೆ ಪತ್ರ ಚಳವಳಿ: ಸಲಹೆ

ಜಿಂದಾಲ್‌ಗೆ ಭೂಮಿ ಮಾರಾಟಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 15:34 IST
Last Updated 20 ಜೂನ್ 2019, 15:34 IST
ಸ್ಕಂದಗಿರಿ ಸಂರಕ್ಷಣಾ ಸಮೂಹ ವಾಟ್ಸ್‌ ಆಪ್‌ ಗುಂಪಿನಲ್ಲಿ ಎಸ್‌.ಎಸ್‌.ಅಲಿ ಅವರ ಪೋಸ್ಟ್
ಸ್ಕಂದಗಿರಿ ಸಂರಕ್ಷಣಾ ಸಮೂಹ ವಾಟ್ಸ್‌ ಆಪ್‌ ಗುಂಪಿನಲ್ಲಿ ಎಸ್‌.ಎಸ್‌.ಅಲಿ ಅವರ ಪೋಸ್ಟ್   

ಬಳ್ಳಾರಿ: ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಲಹೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸ್ಕಂದಗಿರಿ ಸಂರಕ್ಷಣಾ ಸಮೂಹ ಎಂಬ ವಾಟ್ಸ್‌ ಆಪ್‌ ಗುಂಪಿನಲ್ಲಿ ತೋರಣಗಲ್‌ನ ಕಲಾವಿದ ಎಸ್‌.ಎಸ್‌.ಅಲಿ ಈ ಕುರಿತ ಮಾಹಿತಿಯನ್ನು ಗುರುವಾರ ಸಂಜೆ ಮೊದಲುಪೋಸ್ಟ್‌ ಮಾಡಿದ್ದರು.

‘ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ಸರ್ಕಾರದ ನಡೆ ವಿರೋಧಿಸಿ ನಾನು, ನಮ್ಮ ಗೆಳೆಯರು ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಮಾಡಲು ನಿರ್ಧರಿಸಿದ್ದೇವೆ. ನಾವು ತೋರಣಗಲ್‌ ಭಾಗದಲ್ಲಿ ಮತ್ತೆ ಕೃಷಿ ಚಟುವಟಿಕೆಯನ್ನು ಆರಂಭಿಸಲು ನಿರ್ಧರಿಸಿದ್ದು, ರಾಜ್ಯ ಸರ್ಕಾರ ನಮಗೆ ತಲಾ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಬೇಕು. ರೈತರಾಗಲು ಬಯಸಿದ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದು ಕೋರಲಿದ್ದೇವೆ. ಚಳವಳಿಗೆ ಜೊತೆಯಾಗುವವರು ಬೇಡಿಕೆ ಬರೆದು ಮುಖ್ಯಮಂತ್ರಿಗೆ ಪತ್ರ ಕಳಿಸಿ’ ಎಂದು ಅವರು ತಮ್ಮ ಹೆಸರು, ಬಾದಾಮಿ ಭಾಸ್ಕರ ನಾಯಕ, ಬಸವರಾಜ ಸೂಳಿಭಾವಿ, ಜಬೀನಾ ಖಾನಂ ಹೆಸರುಳ್ಳ ಪಟ್ಟಿಯನ್ನು ಸಂಜೆ ನೀಡಿದ್ದರು.

ADVERTISEMENT

ರಾತ್ರಿ ವೇಳೆಗೆ ಈ ಪಟ್ಟಿಯು ದೊಡ್ಡದಾಗಿದ್ದು, ಜಿಲ್ಲೆಯ ವಿವಿಧೆಡೆಯ ಅರವಿಂದ ಪಟೇಲ್‌, ಬಸವರಾಜ ಕಮ್ಮಾರ್‌, ಪಿ.ಗುಲ್ಜಾರ್‌ ಅಹ್ಮದ್‌, ಸುಧಾಚಿದಾನಂದಗೌಡ, ಕೆ.ಎಂ.ಸಂತೋಷ್, ನಿಂಬಗಲ್‌ ರಾಮಕೃಷ್ಣ, ಪತ್ರೇಶ್‌ ಹಿರೇಮಠ ತಮ್ಮ ಹೆಸರುಗಳನ್ನು ಸೇರಿಸಿ ಮತ್ತೆಪೋಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್‌.ಎಸ್‌.ಅಲಿ, ‘ಶುಕ್ರವಾರವೇ ನಾವು ಮುಖ್ಯಮಂತ್ರಿಗೆ ಅಂಚೆಕಾರ್ಡ್‌ನಲ್ಲಿ ಪತ್ರ ಬರೆಯಲಿದ್ದೇವೆ. ಆ ಪತ್ರಚಳವಳಿಯಾದರೂ ಮುಖ್ಯಮಂತ್ರಿಯನ್ನು ಎಚ್ಚರಿಸಲಿ ಎಂಬುದು ನಮ್ಮ ಆಶಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.