ADVERTISEMENT

ಜಡಿ ಮಳೆಗೆ ತಲೆ ಬಾಗಿದ ರಾಗಿ ತೆನೆ: ಬಯಲುಸೀಮೆ ರೈತರಿಗೆ ಆತಂಕ ತಂದ ಮಳೆ, ಚಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:26 IST
Last Updated 12 ನವೆಂಬರ್ 2021, 19:26 IST
ಹೊಲದಲ್ಲಿ ನೆಲಕ್ಕೆ ಒರಗಿದ ರಾಗಿ
ಹೊಲದಲ್ಲಿ ನೆಲಕ್ಕೆ ಒರಗಿದ ರಾಗಿ   

ಬೆಂಗಳೂರು: ಬಯಲುಸೀಮೆ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ತುಂತುರು ಮಳೆಗೆ ರಾಗಿ ಬೆಳೆ ನೆಲಕಚ್ಚಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.

ತೆನೆ ಕಟ್ಟಿದ್ದ ರಾಗಿ ನಿರಂತರ ಮಳೆಯಿಂದಾಗಿ ನೆಲಕ್ಕೆ ಒರಗಿ ಚಾಪೆ ಹಾಸಿದಂತೆ ಮಲಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಗಿ ತೆನೆಯಲ್ಲೇ ಮೊಳಕೆ ಬಂದು ಮತ್ತಷ್ಟು ಹಾನಿಯಾಗಲಿದೆ. ಜಾನುವಾರುಗಳ ಮೇವು ಹಾಳಾಗಲಿದೆ ಎಂಬ ಆತಂಕ ರೈತರಿಗೆ.

ರಾಗಿ ಬೆಳೆಯುವ ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ತಿಪಟೂರು ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಮಳೆ ಕೊರತೆಯಿಂದಾಗಿ ಆಗಸ್ಟ್ ಮಧ್ಯಭಾಗ ಹಾಗೂ ತಿಂಗಳ ಅಂತ್ಯಕ್ಕೆ ಸಾಕಷ್ಟು ಕಡೆಗಳಲ್ಲಿ ರಾಗಿ ಬಿತ್ತನೆಯಾಗಿತ್ತು. ಈಗ ತೆನೆ ಕಟ್ಟಿದ್ದು, ಒಂದೆರಡು ವಾರ ಕಳೆದಿದ್ದರೆ ಕೊಯ್ಲಿಗೆ ಬರುತಿತ್ತು. ಅಷ್ಟರಲ್ಲಿ ಮಳೆಯಾಗಿರುವುದು ಬೆಳೆ ಮಣ್ಣು ಪಾಲಾಗುವಂತೆ ಮಾಡಿದೆ.

ADVERTISEMENT

ಕೋಲಾರ ಜಿಲ್ಲೆಯ ವಾತಾವರಣದಲ್ಲಿ ತೇವಾಂಶ ಹೆಚ್ಚಳಗೊಂಡು ತೋಟಗಾರಿಕೆ ಬೆಳೆ ಮತ್ತು ಹಣ್ಣಿನ ಬೆಳೆಗಳಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಹೂವು ಕಟಾವಿಗೆ ಸಮಸ್ಯೆಯಾಗಿದ್ದು, ಬಗೆ, ಬಗೆಯ ಹೂವುಗಳು ಜಮೀನಿನಲ್ಲೇ ಕೊಳೆಯಲಾರಂಭಿಸಿವೆ.

ಕೋಲಾರ ಜಿಲ್ಲೆಯ 64,567 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಆತಂಕ ತಂದೊಡ್ಡಿದೆ.ರಾಗಿ ಕೊಯ್ಲು ಆರಂಭದ ಸಂದರ್ಭದಲ್ಲೇ ಮಳೆ ಬಿಟ್ಟು ಬಿಡದೆ ಸುರಿಯುತ್ತಿದ್ದು, ರಾಗಿ ತೆನೆಗಳು ನೆಲಕ್ಕೆ ಬಾಗಿ ಜಮೀನಿನಲ್ಲೇ ಮೊಳಕೆಯೊಡೆಯಲಾರಂಭಿಸಿವೆ. ಜಮೀನುಗಳು ಕೆಸರು ಗದ್ದೆಯಂತಾಗಿದ್ದು, ಬೆಳೆ ನಷ್ಟದ ಸಮೀಕ್ಷೆಗೂ ಮಳೆ ಬಿಡುವು
ಕೊಟ್ಟಿಲ್ಲ.

ಟೊಮೆಟೊ, ಆಲೂಗಡ್ಡೆಗೆ ಅಂಗಮಾರಿ:ಹೆಚ್ಚು ಆರ್ದ್ರತೆಯುಳ್ಳ ಹವಾಗುಣ ಮತ್ತು ಮೋಡ ಕವಿದ ವಾತಾವರಣದಿಂದ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಹಾಗೂ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಬಿತ್ತನೆಯಾಗಿರುವ ಆಲೂಗಡ್ಡೆಗಳು ಮಣ್ಣಿನಲ್ಲೇ ಕರಗುತ್ತಿವೆ.

ಟೊಮೆಟೊ, ಆಲೂಗಡ್ಡೆಗೆ ಅಂಗಮಾರಿ

ಹೆಚ್ಚು ಆರ್ದ್ರತೆಯುಳ್ಳ ಹವಾಗುಣ ಮತ್ತು ಮೋಡ ಕವಿದ ವಾತಾವರಣದಿಂದ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಹಾಗೂ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಬಿತ್ತನೆಯಾಗಿರುವ ಆಲೂಗಡ್ಡೆಗಳು ಮಣ್ಣಿನಲ್ಲೇ ಕರಗುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೊ ಬೆಳೆ ಕಡಿಮೆಯಿರುವುದರಿಂದ ಜಡಿ ಮಳೆ ಟೊಮೆಟೊ ಬೆಳೆಗಾರರ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ.

ಮೈಸೂರು ಮರ ಉರುಳಿ ಕಾರುಗಳು ಜಖಂ

ಮೈಸೂರು: ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿದ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ.

ಶ್ರೀಹರ್ಷ ರಸ್ತೆಯ ಆರ್‌ಆರ್‌ಆರ್‌ ಹೋಟೆಲ್ ಮುಂಭಾಗ ಬೃಹತ್ ಗಾತ್ರ ಮರ ಉರುಳಿ 4 ಕಾರುಗಳು ಜಖಂಗೊಂಡಿವೆ.ಗುರುವಾರ ರಾತ್ರಿ ಅಪೇರಾ ಸಿನಿಮಾ ಮಂದಿರದ ಸಮೀಪ ಮರಗಳು ಉರುಳಿ 3 ಕಾರುಗಳು ಮತ್ತು 2 ಬೈಕ್‌ಗಳು ಜಖಂಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.