ADVERTISEMENT

ದುನಿಯಾ ‘ಕೀರ್ತಿ’ಗೆ ಪತ್ನಿಯ ಚಪ್ಪಲಿ ಏಟು!

ದಾಂದಲೆ ದೃಶ್ಯ ಬಹಿರಂಗ * ಎಫ್‌ಐಆರ್ ದಾಖಲಾದ ಬಳಿಕ ನಾಗರತ್ನ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:29 IST
Last Updated 28 ಅಕ್ಟೋಬರ್ 2018, 20:29 IST
   

ಬೆಂಗಳೂರು: ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿ ಗೌಡ ಅವರಿಗೆ ಚಪ್ಪಲಿಯಿಂದ ಹೊಡೆದು ದಾಂದಲೆ ನಡೆಸಿರುವ ದೃಶ್ಯ ಭಾನುವಾರ ಬಹಿರಂಗವಾಗಿದೆ.

ಜಿಮ್ ತರಬೇತುದಾರ ಮಾರುತಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ವಿಜಯ್ ಅವರನ್ನು ಹೈಗ್ರೌಂಡ್ಸ್ ಪೊಲೀಸರು ಸೆ.22ರಂದು ಬಂಧಿಸಿದ್ದರು. ಮರುದಿನ ಮಧ್ಯಾಹ್ನ ನಾಗರತ್ನ ಹೊಸಕೆರೆಹಳ್ಳಿಯ ಕೀರ್ತಿಗೌಡ ಮನೆಗೆ ತೆರಳಿ ದಾಂದಲೆ ನಡೆಸಿದ್ದರು.

ಅಲ್ಲದೆ, ‘ನನ್ನ ಮಗನನ್ನು ಕರೆದುಕೊಂಡು ಬರಲು ಕೀರ್ತಿ ಮನೆಗೆ ಹೋಗಿದ್ದಾಗ, ಆಕೆ ಬೌನ್ಸರ್‌ಗಳನ್ನು ಬಿಟ್ಟು ಹೊಡೆಸಿದಳು’ ಎಂದು ಸೆ. 23ರಂದು ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೇ ನಾಗರತ್ನ ಮಗಳು ಮೋನಿಕಾ ಸಹ, ‘ತಂದೆ ವಿಜಯ್ ಹಾಗೂ ಕೀರ್ತಿ ನನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ಅ.22ರಂದು ದೂರು ಸಲ್ಲಿಸಿದ್ದರು.

ADVERTISEMENT

ಪ್ರಕರಣಕ್ಕೆ ತಿರುವು: ಇದೀಗ ಕೀರ್ತಿಗೌಡ ಅವರು ಸೆ. 22ರಂದು ನಡೆದಿದ್ದ ದಾಂದಲೆಯ ದೃಶ್ಯದ ಸಮೇತ ಠಾಣೆಯ ಮೆಟ್ಟಿಲೇರಿದ್ದಾರೆ.

‘ನಾಗರತ್ನ ನನಗೆ ಚಪ್ಪಲಿಯಿಂದ ಹೊಡೆದರು’ ಎಂದು ಶನಿವಾರ ದೂರು ಕೊಟ್ಟಿರುವ ಕೀರ್ತಿ, ಸಾಕ್ಷ್ಯವಾಗಿ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳನ್ನೂ ಕೊಟ್ಟಿದ್ದಾರೆ. ಅದನ್ನು ನೋಡಿದ ಬಳಿಕ ಐಪಿಸಿ ಸೆಕ್ಷನ್ 326ರ (ಗಂಭೀರ ಸ್ವರೂಪದ ಹಲ್ಲೆ) ಅಡಿ ನಾಗರತ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಬೆಳಿಗ್ಗೆ ಆ ದೃಶ್ಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದಾರೆ ಎಂದು ಗಿರಿನಗರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ದೂರಿನ ವಿವರ: ‘ಸೆ.22ರಂದು ಪತಿಯನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ, ಅತ್ತೆ-ಮಾವನನ್ನು ಸಂತೈಸಲು ವಿಜಯ್ ಅವರ ಸ್ನೇಹಿತರಿಬ್ಬರು ಮನೆಗೆ ಬಂದಿದ್ದರು. ಎಲ್ಲರೂ ಕುಳಿತು ಮಾತನಾಡುತ್ತಿದ್ದಾಗ ಏಕಾಏಕಿ ಮನೆಗೆ ನುಗ್ಗಿದ ನಾಗರತ್ನ, ಚಪ್ಪಲಿಯಿಂದ ನನಗೆ ಹೊಡೆದರು. ಕೂದಲು ಹಿಡಿದು ಎಳೆದಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈಗಲೇ ಮುಗಿಸಿಬಿಡುತ್ತೇನೆ ಎಂದು ಕಿರುಚಾಡಿದರು. ನನ್ನ ಕರಿಮಣಿಯಿಂದ ಕುತ್ತಿಗೆಯನ್ನೂ ಬಿಗಿದರು.’

‘ಇದರಿಂದ ಕುತ್ತಿಗೆ ಹಾಗೂ ತಲೆಗೆ ಗಂಭೀರ ಗಾಯಗಳಾದವು. ಕೂಡಲೇ ಸಂಬಂಧಿಗಳು ಅವರನ್ನು ಹಿಡಿದು ನಿಯಂತ್ರಿಸಿದರು. ಈ ವೇಳೆ ಅವರು ಮಾವನ ಮೇಲೂ ಕೈ ಮಾಡಿದರು. ನಾಗರತ್ನ ತಮ್ಮ ಸಂಪತ್ ಕೂಡ ಜತೆಗಿದ್ದರು. ನಮಗೆ ಜೀವ ಬೆದರಿಕೆ ಹಾಕಿ, ಬಲವಂತವಾಗಿ ನಮ್ಮ ಕಾರನ್ನು ತೆಗೆದುಕೊಂಡು ಹೋದರು.’

‘ಇದಕ್ಕೂ ಮುನ್ನ ನಾಗರತ್ನ ಮಗಳು ಮೋನಿಕಾ ಕೂಡ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಳು. ಕಲ್ಲಿನಿಂದ ಬಾಗಿಲಿಗೆ ಹೊಡೆದಿದ್ದಳು. ಕೊನೆಗೆ, ಠಾಣೆಗೆ ಹೋಗಿ ನಾವೇ ಹಲ್ಲೆ ನಡೆಸಿದ್ದಾಗಿ ಸುಳ್ಳು ದೂರು ನೀಡಿದಳು. ಹೀಗೆ, ತಾಯಿ–ಮಗಳು ಪ್ರತಿದಿನ ಒಂದಿಲ್ಲೊಂದು ಕಾರಣಕ್ಕೆ ಜಗಳ ತೆಗೆದು ದೂರುಗಳನ್ನು ದಾಖಲಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಕೀರ್ತಿ ನಾಲ್ಕು ಪುಟಗಳ ದೂರಿನಲ್ಲಿ ವಿವರಿಸಿದ್ದಾರೆ.

ಮಗಳ ವಿಚಾರಣೆ: ನಾಗರತ್ನ ಅವರನ್ನು ಬಂಧಿಸಲು ಪೊಲೀಸರು ಬೆಳಿಗ್ಗೆ ಕತ್ರಿಗುಪ್ಪೆಯಲ್ಲಿನ ಅವರ ಮನೆ ಬಳಿ ತೆರಳಿದ್ದರು. ಬಾಗಿಲು ತೆಗೆಯದ ಮೋನಿಕಾ, ‘ತಾಯಿ ಮನೆ ಯಲ್ಲಿಲ್ಲ’ ಎಂದರು. ಆಕೆ ಮೇಲೂ ಆರೋಪ ಇದ್ದುದರಿಂದ ಪೊಲೀಸರು ಮೋನಿಕಾಳನ್ನೇ ವಿಚಾರಣೆಗಾಗಿ ಕರೆದೊಯ್ದರು.

ಈ ವಿಚಾರ ತಿಳಿದು ಠಾಣೆ ಬಳಿ ಬಂದ ಕೀರ್ತಿಗೌಡ, ‘ತಾಯಿ ಮಾಡಿದ ತಪ್ಪಿಗೆ ಮಗಳಿಗೆ ಶಿಕ್ಷೆ ಕೊಡುವುದು ಸರಿಯಲ್ಲ. ಯಾವುದೇ ಹೆಣ್ಣು ಮಗುವಿಗೂ ಇಂಥ ದುಸ್ಥಿತಿ ಬರಬಾರದು. ಆಕೆ ಮೇಲೆ ಕ್ರಮ ತೆಗೆದುಕೊಳ್ಳಬೇಡಿ’ ಎಂದು ಕಣ್ಣೀರಿಟ್ಟರು.

‘ಮೋನಿಕಾ ನನ್ನ ಪಾಲಿಗಿಲ್ಲ’

‘ನಾಗರತ್ನ ನನ್ನ ಮೇಲೆ ಒಂದಷ್ಟು ಎಫ್‌ಐಆರ್‌ಗಳನ್ನು ಮಾಡಿಸಿದ್ದಾಳೆ. ಇದರಿಂದಾಗಿ ಪ್ರತಿ ದಿನವನ್ನೂ ನಾನು ಪೊಲೀಸ್ ಸ್ಟೇಷನ್‌ನಲ್ಲಿ, ಕೋರ್ಟ್‌ನಲ್ಲಿ, ಮಾಧ್ಯಮಗಳ ಮುಂದೆ ಕಳೆಯುವಂತಾಗಿದೆ. ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ಮಗಳು ಮೋನಿಕಾ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ ಅಷ್ಟೆ. ಇನ್ನು ಮುಂದೆ ಆಕೆ ನನ್ನ ಪಾಲಿಗೆ ಸತ್ತಂತೆ’ ಎಂದು ವಿಜಯ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.