
‘ಇ–ಸ್ವತ್ತು
ಬೆಂಗಳೂರು: ಗ್ರಾಮೀಣ ಪ್ರದೇಶದ ಕಂದಾಯ ಜಮೀನುಗಳಲ್ಲಿನ ನಿವೇಶನ, ಅಕ್ರಮ ಕಟ್ಟಡ ಸೇರಿದಂತೆ 95.75 ಲಕ್ಷ ಸ್ವತ್ತುಗಳಿಗೆ ‘ಇ–ಸ್ವತ್ತು’ ನೀಡುವ ಮಹತ್ವದ ಯೋಜನೆಗೆ ಪಂಚಾಯತ್ ರಾಜ್ ಇಲಾಖೆ ಚಾಲನೆ ನೀಡಿದೆ.
ಇದಕ್ಕಾಗಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ಕ್ಕೆ ತಿದ್ದುಪಡಿ ತರಲಾಗಿದೆ.
ಗ್ರಾಮೀಣ ಪ್ರದೇಶಗಳ ಜನರು ಭೂಪರಿವರ್ತನೆ ಮಾಡಿಕೊಳ್ಳದೆ, ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೆ ನಿವೇಶನ, ಮನೆ, ಕಟ್ಟಡಗಳನ್ನು ದಶಕಗಳಿಂದ ನಿರ್ಮಿಸಿಕೊಂಡಿದ್ದರು. ಖಾತಾ ಸ್ವತ್ತುಗಳಾಗದ ಕಾರಣ ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹವನ್ನೂ ಮಾಡುತ್ತಿರಲಿಲ್ಲ. ರಸ್ತೆ, ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿದ ಪಂಚಾಯಿತಿಗಳು ಮಾತ್ರ ನಮೂನೆ–9, 9–ಎ ಮತ್ತು 11–ಎ ವಿತರಿಸಿ ತೆರಿಗೆ ಸಂಗ್ರಹ ಮಾಡುತ್ತಿದ್ದವು.
ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಮತ್ತು ಗ್ರಾಮೀಣ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೇವೆಗಳನ್ನು ಒದಗಿಸಲು ಇಂತಹ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಆರಂಭಿಸಲಾಗುವುದು ಎಂದು 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.
ಅದರಂತೆ ಕಾಯ್ದೆಗೆ ತಿದ್ದುಪಡಿ ತಂದು ಪ್ರಕರಣ 199(ಬಿ) ಹಾಗೂ ಪ್ರಕರಣ 199(ಸಿ) ಸೇರಿಸಲಾಗಿತ್ತು. ಪ್ರಕರಣ ಸ್ವತ್ತುಗಳಿಗೆ ಖಾತಾ ಮಾಡುವುದು (199–ಬಿ), ಕಟ್ಟಡ ಮತ್ತು ಪರಿವರ್ತನೆಯಾಗದ, ಪರಿವರ್ತನೆಯಾದ ಭೂಮಿ. ಕಂದಾಯ ಭೂಮಿಯಲ್ಲಿನ ಬಡಾವಣೆಗಳ ಮೇಲಿನ ತೆರಿಗೆಗಳನ್ನು (199–ಸಿ) ಸೇರಿಸಲಾಗಿತ್ತು.
ಈ ಕುರಿತು ಮಾಹಿತಿ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ತಿದ್ದುಪಡಿಯನ್ನು ಆಧರಿಸಿ ಅಸ್ತಿತ್ವದಲ್ಲಿದ್ದ ತೆರಿಗೆ ನಿಯಮಗಳು 2021ನ್ನು ರದ್ದು ಮಾಡಲಾಗಿದೆ. ಹೊಸದಾಗಿ ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ತೆರಿಗೆ, ಶುಲ್ಕ, ನಿರಾಕ್ಷೇಪಣಾ (ಎನ್‌ಒಸಿ) ಪರವಾನಗಿ ದರಗಳನ್ನು ವೈಜ್ಞಾನಿಕವಾಗಿ ನಿಗದಿ ಮಾಡಲಾಗಿದ್ದು, ಆ ಮೂಲಕ ಗ್ರಾಮಗಳಲ್ಲಿ ಇ-ಸ್ವತ್ತು ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳಲು ಇದ್ದ ಎಲ್ಲ ಅಡತಡೆಗಳನ್ನು ನಿವಾರಣೆ ಮಾಡಲಾಗಿದೆ’ ಎಂದಿದ್ದಾರೆ.
ಗ್ರಾಮ ಪಂಚಾಯಿತಿಯ ಎಲ್ಲಾ ಆಸ್ತಿಗಳ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕ ಒದಗಿಸಿ ತಮ್ಮ ಆಸ್ತಿಗಳ ಮಾಹಿತಿಯನ್ನು ಸರಿಪಡಿಸಿಕೊಳ್ಳಬಹುದು. ಆಸ್ತಿ ಮಾಲೀಕರು ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವ ಮೂಲಕ ದಾಖಲೆ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
ತೆರಿಗೆ, ದರ ಅಥವಾ ಶುಲ್ಕಗಳ ನಿರ್ಧರಣೆ, ವಸೂಲಿ ಅಥವಾ ವಿಧಿಸುವಿಕೆಯಿಂದ ತೊಂದರೆಯಾದವರು ಉಪ ಕಾರ್ಯದರ್ಶಿಗೆ (ಅಭಿವೃದ್ಧಿ) ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಲಾಗಿದೆ. ಎರಡನೇ ಮೇಲ್ಮನವಿಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಹೊಸದಾದ ಐತಿಹಾಸಿಕ ನಿಯಮಗಳಿಂದ ಜನರಿಗೆ ಅನುಕೂಲವಾಗಲಿದೆ. ಗ್ರಾಮ ಪಂಚಾಯಿತಿಗಳ ಸಂಪನ್ಮೂಲದ ಹೆಚ್ಚಳ ವಾಗಲಿದ್ದು, ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲಿವೆಪ್ರಿಯಾಂಕ್ ಖರ್ಗೆ, ಪಂಚಾಯತ್ ರಾಜ್ ಸಚಿವ
ಪಿಡಿಒ ಅನುಮೋದನೆಗೂ ಕಾಲಮಿತಿ
ನೂತನ ನಿಯಮಗಳಲ್ಲಿ ತೆರಿಗೆ ಲೆಕ್ಕಾಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ.
ನಿಗದಿತ ಅವಧಿಯ ಒಳಗೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಕಾರ್ಯದರ್ಶಿ ಅನುಮೋದನೆ ನೀಡದಿದ್ದಲ್ಲಿ ಸ್ವಂಚಾಲಿತ ಅನುಮೋದನೆಗೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಪೂರಕವಾಗಿ ಎರಡು ವಾರಗಳಲ್ಲಿ ತಂತ್ರಾಂಶ ದಲ್ಲಿ ಬದಲಾವಣೆ ತರಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೇಕಾದ ದಾಖಲೆ
ಭೂ ನೋಂದಣಿ ಪ್ರಮಾಣಪತ್ರ
2025ನೇ ಏಪ್ರಿಲ್‌ಗೂ ಹಿಂದಿನ ತೆರಿಗೆ ಪಾವತಿ ರಸೀದಿ
ವಿದ್ಯುತ್ ಬಿಲ್, ಋಣಭಾರ ಪ್ರಮಾಣಪತ್ರ (ಇಸಿ)
ಭೂಪರಿವರ್ತನೆ ಆದೇಶ (ಇದ್ದರೆ ಮಾತ್ರ)
ಬಡಾವಣೆ ಅನುಮೋದಿತ ವಿನ್ಯಾಸ (ಇದ್ದರೆ)
ನೋಂದಾಯಿತ ಪರಿತ್ಯಾಜನಾ ಪತ್ರ
ಭೂ ಮಂಜೂರಾತಿ ಆದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.