ADVERTISEMENT

ರಾಷ್ಟ್ರವಿರೋಧಿ ಆಂದೋಲನಗಳಲ್ಲಿ ಪಾಲ್ಗೊಳ್ಳುವುದು ದೇಶದ್ರೋಹ

ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ವಜುಭಾಯಿ ವಾಲಾ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 19:52 IST
Last Updated 25 ಜನವರಿ 2020, 19:52 IST
ಅಂಗವಿಕಲ ಮತದಾರರೊಬ್ಬರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಗುರುತಿನ ಚೀಟಿಯನ್ನು ವಿತರಿಸಿದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ
ಅಂಗವಿಕಲ ಮತದಾರರೊಬ್ಬರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಗುರುತಿನ ಚೀಟಿಯನ್ನು ವಿತರಿಸಿದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆಂದೋಲನ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ, ರಾಷ್ಟ ವಿರೋಧಿ ಪ್ರವೃತ್ತಿಯ ಆಂದೋಲನಗಳಲ್ಲಿ ಪಾಲ್ಗೊಳ್ಳುವವರು ದೇಶದ್ರೋಹಿಗಳು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಪಾದಿಸಿದರು.

ಪುರಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಹಕ್ಕುಗಳನ್ನು ಪ್ರತಿಪಾದಿಸುವ ಜತೆಗೆ ತನ್ನ ಕರ್ತವ್ಯವನ್ನೂ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕರ್ತವ್ಯಕ್ಕಿಂತ ಆಂದೋಲನಗಳು ಹೆಚ್ಚಾಗುತ್ತಿವೆ. ಹೋರಾಟಗಳು ರಾಷ್ಟ್ರವನ್ನು ಸದೃಢಗೊಳಿಸುವಂತೆ ಇರಬೇಕೇ ಹೊರತು ವಿಭಜನೆ ಮಾಡುವಂತಿರಬಾರದು. ಈ ಮಾತನ್ನು ಮಹಾತ್ಮ ಗಾಂಧೀಜಿ ಸಹಾ ಹೇಳುತ್ತಿದ್ದರು’ ಎಂದರು.

‘ಜಾತಿ, ಪಂಥ, ಪಕ್ಷಕ್ಕಾಗಿ ಅಥವಾ ಯಾವುದೋ ವ್ಯಕ್ತಿಯ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಇಂದು ಆಂದೋಲನಗಳು ನಡೆಯುತ್ತಿವೆ. ಆ ರೀತಿಯ ಆಂದೋಲನಗಳಲ್ಲಿ ಪಾಲ್ಗೊಳ್ಳಬೇಡಿ' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

'ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಅವರು ಇಡೀ ಜೀವನವನ್ನು ರಾಷ್ಟ್ರಕ್ಕಾಗಿ‌ ಮುಡಿಪಾಗಿಟ್ಟರು. ಅವರಿಂದ ನಾವು ಪ್ರೇರಣೆ ಪಡೆಯಬೇಕು. ದೇಶಕ್ಕಾಗಿ ಬದುಕೋಣ, ದೇಶಕ್ಕಾಗಿ ದುಡಿಯೋಣ, ‌ಅಗತ್ಯ ಬಿದ್ದರೆ ದೇಶಕ್ಕಾಗಿ ಪ್ರಾಣವನ್ನೂ ತ್ಯಾಗ ಮಾಡೋಣ’ ಎಂದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್, ‘ಸದೃಢ ಭಾರತ ನಿರ್ಮಾಣದಲ್ಲಿ ಮತದಾರರ ಪಾತ್ರ ದೊಡ್ಡದು. ಮತದಾನದಿಂದ ಯಾರೊಬ್ಬರೂ ಹೊರಗುಳಿಯಬಾರದು. ಎಲ್ಲರನ್ನು ಪಾಲ್ಗೊಳ್ಳುವಂತೆ ಮಾಡಲು ಕೇಂದ್ರ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದು ಹೇಳಿದರು.

2019ರ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಉಪಚುನಾವಣೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಚುನಾವಣಾ ಆಯೋಗದಿಂದ ಪ್ರಶಸ್ತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.