ADVERTISEMENT

ಇ.ಡಿ ಡೀಲ್: ಮತ್ತಷ್ಟು ಜನರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 16:39 IST
Last Updated 12 ನವೆಂಬರ್ 2018, 16:39 IST

ಬೆಂಗಳೂರು: ‘ಇ.ಡಿ ಡೀಲ್’ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿರುವ ಸಿಸಿಬಿ ಪೊಲೀಸರು, ಅದೇ ಪ್ರಕಸರಣದಲ್ಲಿ ಮತ್ತಷ್ಟು ಮಂದಿಯನ್ನು ಸೋಮವಾರ ವಿಚಾರಣೆಗೆ ಒಳಪಡಿಸಿದರು.

‘ಆ್ಯಂಬಿಡೆಂಟ್’ ಕಂಪನಿಯ ಫರೀದ್, ರೆಡ್ಡಿ ಅವರ ಸೂಚನೆಯಂತೆ ಆಭರಣ ವ್ಯಾಪಾರಿ ರಮೇಶ್ ಕೊಠಾರಿಯ ಬ್ಯಾಂಕ್ ಖಾತೆಗೆ ₹ 20 ಕೋಟಿ ಹಾಕಿದ್ದ. ಆತ ಹಣಕ್ಕೆ ಪ್ರತಿಯಾಗಿ 57 ಕೆ.ಜಿ ಚಿನ್ನದ ಗಟ್ಟಿಗಳನ್ನು ಬಳ್ಳಾರಿಯ ‘ರಾಜ್‌ಮಹಲ್’ ಜ್ಯುವೆಲರ್ಸ್ ಮಳಿಗೆ ಮಾಲೀಕ ರಮೇಶ್‌ಗೆ ತಲುಪಿಸಿದ್ದ. ಆ ರಮೇಶ್‌ನೇ ಚಿನ್ನದ ಗಟ್ಟಿಗಳನ್ನು ರೆಡ್ಡಿಗೆ ಮುಟ್ಟಿಸಿದ್ದರು ಎಂಬ ಸಂಗತಿ ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ.

ರೆಡ್ಡಿ ಪಡೆದಿದ್ದ ಚಿನ್ನದ ಗಟ್ಟಿಗಳು ಸದ್ಯ ಎಲ್ಲಿವೆ ಎಂಬುದು ಗೊತ್ತಾಗಿಲ್ಲ. ಹೀಗಾಗಿ ಪೊಲೀಸರು, ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ಮಾಡುತ್ತಿದ್ದಾರೆ.

ADVERTISEMENT

ಮತ್ತಷ್ಟು ಮಾಹಿತಿ ಸಂಗ್ರಹ:‘ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ. ಜತೆಗೆ, ಇನ್ನು ಹಲವರನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ತಿಳಿಸಿದರು.

‘ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಮಾತ್ರ ಬಂಧಿಸಿದ್ದೇವೆ. ಆಲಿಖಾನ್‌ನನ್ನು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದು, ಅಗತ್ಯವಿದ್ದರೆ ಪುನಃ ವಿಚಾರಣೆಗೆ ಕರೆಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.