ADVERTISEMENT

MUDA Scam | ಇ.ಡಿ ನಡೆಗೆ ತೀವ್ರ ಆಕ್ಷೇಪ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್‌ ವಿರುದ್ಧದ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 0:30 IST
Last Updated 28 ಮಾರ್ಚ್ 2025, 0:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್‌ ಅರ್ಜಿಯನ್ನು ಪುರಸ್ಕರಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಮೇಲ್ಮನವಿಯ ಮಧ್ಯಂತರ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಈ ಕುರಿತ ಮೇಲ್ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಪೂರ್ಣಗೊಳಿಸಿತು.

ವಿಚಾರಣೆ ವೇಳೆ ನಟೇಶ್‌ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ದುಶ್ಯಂತ ದವೆ ಅವರು, ‘ರಾಜ್ಯದ ಮೂರು ರಾಜಕೀಯ ಪಕ್ಷಗಳ 38 ಹಿರಿಯ ರಾಜಕಾರಣಿಗಳ ವಿರುದ್ಧದ ಪ್ರಕರಣಗಳು ಕಳೆದ 30 ವರ್ಷಗಳಿಂದ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಮಾಜಿ ಮುಖ್ಯಮಂತ್ರಿಯೊಬ್ಬರು‌ 11 ಪ್ರಕರಣಗಳಲ್ಲಿ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ, ಅವರ ವಿರುದ್ಧ ಇ.ಡಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಬಲವಾಗಿ ಆಕ್ಷೇಪಿಸಿದರು.

ADVERTISEMENT

‘ಜಾರಿ ನಿರ್ದೇಶನಾಲಯವನ್ನು ಅಸ್ತ್ರವನ್ನಾಗಿಕೊಂಡು ಆಯ್ದ ವ್ಯಕ್ತಿಗಳಿಗೆ ಕಿರುಕುಳ ನೀಡಲು ಬಳಸಿಕೊಳ್ಳಲಾಗುತ್ತಿದೆ. ಜಾರಿ ನಿರ್ದೇಶನಾಲಯ ಈ ರೀತಿಯ ನೋಟಿಸ್‌ಗಳನ್ನು  ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾಕೆ ಜಾರಿ ಮಾಡುತ್ತಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಮುಡಾ‌ದಿಂದ ಸಿಎಂ ಅವರ ಪತ್ನಿಗೆ ಬದಲಿ ನಿವೇಶನ ನೀಡಿರುವ ಪ್ರಕರಣದಲ್ಲಿ ಮಾತ್ರ ಇ.ಡಿ ಏಕೆ ಸಮನ್ಸ್ ನೀಡಿದೆ? ಇದರ ಹಿಂದಿನ ಉದ್ದೇಶವೇನು’ ಎಂದು ಪ್ರಶ್ನಿಸಿದರು. 

‘ದೇಶದಲ್ಲಿ ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ಎಫ್ಐಆರ್ ದಾಖಲಾದ ತಕ್ಷಣ ಇ.ಡಿ ನೋಟಿಸ್ ನೀಡುತ್ತದೆಯೇ’ ಎಂದು ಪ್ರಶ್ನಿಸಿದ ಅವರು, ‘ಇ.ಡಿಯ ಈ ನಡೆ ಅಧಿಕಾರ ದುರುಪಯೋಗಕ್ಕೆ ಪ್ರಮುಖ ಉದಾಹರಣೆಯಾಗಿದೆ. ಈ ಬೆಳವಣಿಗೆಗಳು ದೇಶದಲ್ಲಿ ಯಾರೂ ಸುರಕ್ಷಿತರಲ್ಲ ಎಂಬ ಭಾವನೆಯನ್ನು ಎತ್ತಿ ತೋರಿಸುತ್ತದೆ’ ಎಂದರು.

ಇ.ಡಿ ಪರ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಮತ್ತು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌ ವಾದ ಮಂಡಿಸಿದರು.

====

ಅಸ್ತಿತ್ವದಲ್ಲಿ ಇಲ್ಲದ ಆದೇಶ ಉಲ್ಲೇಖ: ಕ್ರಮಕ್ಕೆ ಶಿಫಾರಸು

ಅಸ್ತಿತ್ವದಲ್ಲೇ ಇಲ್ಲದ ಸುಪ್ರೀಂ ಕೊರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ಆದೇಶ ನೀಡಿದ್ದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್‌ ಶಿಫಾರಸು ಮಾಡಿದೆ.

ತಪ್ಪಾದ ತೀರ್ಪುಗಳನ್ನು ಉಲ್ಲೇಖಿಸಿ ಸಿವಿಲ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಮ್ಮಾನ್‌ ಕ್ಯಾಪಿಟಲ್‌ ಲಿಮಿಟೆಡ್‌ ಮತ್ತು ಸಮ್ಮಾನ್‌ ಫಿನ್‌ಸರ್ವ್ ಲಿಮಿಟೆಡ್‌ ಕಂಪನಿಗಳು ಸಲ್ಲಿಸಿದ್ದ ಸಿವಿಲ್‌ ಪುನರಾವಲೋಕನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರ ಈ ಕೃತ್ಯವನ್ನು ಕಾನೂನಿನ ಅಡಿಯಲ್ಲಿ ಸೂಕ್ತ ತನಿಖೆಗೆ ಒಳಪಡಿಸಬೇಕಾದ ಅಗತ್ಯವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದಿರಿಸಬೇಕು’ ಎಂದು  ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನಿರ್ದೇಶಿಸಿದೆ. ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದರು.

====

ಮಲ್ಪೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜಾಮೀನು

ಬೆಂಗಳೂರು: ‘ಮೀನು ಕದ್ದಿದ್ದಾರೆ’ ಎಂಬ ಅರೋಪದಡಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಈ ಸಂಬಂಧ ಜಾಮೀನು ಕೋರಿ ಲಕ್ಷ್ಮಿ ಸಾಲಿಯಾನ ಶಿಲ್ಪಾ ಬಾಯಿ ಹಾಗೂ ಸುಂದರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲೆ ಊರ್ಮಿಳಾ ಪುಲ್ಲತ್ ಅವರು ‘ಬಂಧನಕ್ಕೂ ಮುನ್ನ ಪೊಲೀಸರು ಆರೋಪಿಗಳಿಗೆ ಸಕಾರಣವನ್ನು ತಿಳಿಸಿಲ್ಲ. ಇದು ಕಾನೂನು ಲೋಪ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ವಾದಾಂಶವನ್ನು ಪುರಸ್ಕರಿಸಿದ ನ್ಯಾಯಪೀಠ ‘ಅರ್ಜಿದಾರರು ಬಿಡುಗಡೆಗೊಂಡ ನಂತರ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗುವ ಅಥವಾ ಅವರನ್ನು ವೈಭವೀಕರಿಸಿ ಬರಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ತಿಳಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.  ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989ರ ವಿವಿಧ ಕಲಂಗಳ ಅಡಿಯಲ್ಲಿ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.