ADVERTISEMENT

ಎನ್‌ಇಪಿ ಹೇರಿಕೆಗೆ ಕೇಂದ್ರದ ಹುನ್ನಾರ: 6 ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಆರೋಪ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 23:30 IST
Last Updated 5 ಫೆಬ್ರುವರಿ 2025, 23:30 IST
ಯುಜಿಸಿ
ಯುಜಿಸಿ   

ಬೆಂಗಳೂರು: ಕೇಂದ್ರ ಸರ್ಕಾರ 2022ರಲ್ಲಿ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರಾಜ್ಯಗಳ ಮೇಲೆ ಬಲವಂತವಾಗಿ ಹೇರಲು ಕೇಂದ್ರ ಸರ್ಕಾರ ಯುಜಿಸಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರು ರಾಜ್ಯಗಳ ಉನ್ನತ ಶಿಕ್ಷಣ ಸಚಿವರು ದೂರಿದರು.

ನಗರದಲ್ಲಿ ಬುಧವಾರ ನಡೆದ ಉನ್ನತ ಶಿಕ್ಷಣ ಸಚಿವರ ಸಮಾವೇಶದಲ್ಲಿ ಭಾಗವಹಿಸಿದ್ದ ಜಾರ್ಖಂಡ್‌ನ ಸುದಿವ್ಯಕುಮಾರ್ ಮಾತನಾಡಿ, ಎನ್‌ಇಪಿಯಲ್ಲಿನ ಎಲ್ಲ ಅಂಶಗಳನ್ನೂ ಕಡ್ಡಾಯವಾಗಿ ಪಾಲಿಸುವಂತೆ ಕರಡು ನಿಯಮ ಹೇಳುತ್ತದೆ. ಅನುಷ್ಠಾನಗೊಳಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ತೆಗೆದುಕೊಳ್ಳುವ ಕ್ರಮಗಳ ಪಟ್ಟಿ ವಿಪರೀತವಾಗಿವೆ. ಇಂತಹ ನಡೆ ಸರ್ವಾಧಿಕಾರಿಯಾಗಿದೆ. ಪ್ರಜಾಸತ್ತಾತ್ಮಕವಾಗಿಲ್ಲ ಎಂದು ಹೇಳಿದರು.

ಎನ್‌ಇಪಿ ನಿಯಮಗಳಲ್ಲಿ ಅಳವಡಿಸಿದ್ದ ದ್ವಿಪದವಿ ವ್ಯವಸ್ಥೆ, ಬಹುಪ್ರವೇಶ, ಬಹುನಿರ್ಗಮನ ಮೊದಲಾದ ಅಂಶಗಳನ್ನು ಯುಜಿಸಿ ನಿಯಮಗಳಲ್ಲೂ ಉಲ್ಲೇಖಿಸಲಾಗಿದೆ. ಇಂತಹ ವಿಷಯಗಳನ್ನು ಅಳವಡಿಸುವ ಮೊದಲು ರಾಜ್ಯಗಳ ಜತೆ ಚರ್ಚಿಸಿಲ್ಲ. ಎನ್‌ಇಪಿ ತಿರಿಸ್ಕರಿಸಿದ ರಾಜ್ಯಗಳ ಮೇಲೆ ಬಲವಂತದ ಹೇರಿಕೆ ಮಾಡಲಾಗುತ್ತಿದೆ ಎಂದು ಹಿಮಾಚಲ ಪ್ರದೇಶದ ಸಚಿವ ರೋಹಿತ್ ಠಾಕೂರ್‌ ದೂರಿದರು.

ADVERTISEMENT

ಎನ್‌ಇಪಿ ವಿರೋಧಿಸಿ: ಶಿವಕುಮಾರ್

ಯುಜಿಸಿ ಕರಡು ನಿಯಮಗಳ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ (ಎನ್‌ಇಪಿ) ಹಿಂಪಡೆಯಲು ಕೇಂದ್ರದ ಮೇಲೆ ಎಲ್ಲ ರಾಜ್ಯಗಳೂ ಒತ್ತಡ ಹಾಕಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.

ಉನ್ನತ ಶಿಕ್ಷಣ ಸಚಿವರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಇಪಿಯಲ್ಲಿ ಹಲವು ನ್ಯೂನತೆಗಳಿವೆ. ಹಾಗಾಗಿ, ರಾಜ್ಯ ಶಿಕ್ಷಣ ನೀತಿ ರೂಪಿಸಲು ಆಯೋಗ ರಚಿಸಲಾಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲೂ ಹಲವು ಸುಧಾರಣೆ ಮಾಡಬೇಕಿದೆ. ಶಿಕ್ಷಣ ವ್ಯವಸ್ಥೆ ಜಾಗತೀಕರಣಗೊಳಿಸಲು ತಜ್ಞರ ಅಭಿಪ್ರಾಯ ಪಡೆಯಬೇಕಿದೆ ಎಂದರು.

ಗೃಹ ಸಚಿವ ಡಾ. ಜಿ ಪರಮೇಶ್ವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.