ADVERTISEMENT

‘10 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಸ್ತಾವ’

ಇಲಾಖೆಯ ಬಜೆಟ್‌ ಕುರಿತ ಪೂರ್ವಭಾವಿ ಸಭೆ ನಡೆಸಿದ ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 18:37 IST
Last Updated 8 ಜನವರಿ 2021, 18:37 IST
ಎಸ್. ಸುರೇಶ್‌ಕುಮಾರ್
ಎಸ್. ಸುರೇಶ್‌ಕುಮಾರ್   

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ 10 ಸಾವಿರ ಶಾಲಾ ಶಿಕ್ಷಕರ ನೇಮಕವೂ ಸೇರಿದಂತೆ ಐದು ಪ್ರಮುಖ ಪ್ರಸ್ತಾವಗಳನ್ನು ಮುಂದಿನ ಬಜೆಟ್‌ನಲ್ಲಿ ಸೇರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಮುಂದಿನ ವರ್ಷದ ಬಜೆಟ್ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ಪ್ರಸ್ತಾವಗಳನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ ಇಲಾಖೆಯ ಅಧಿಕಾರಿಗಳೊಂದಿಗೆ ನಗರದಲ್ಲಿ ಶುಕ್ರವಾರ ನಡೆಸಿದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 8 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 2 ಸಾವಿರ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ, ಒಂದು ಸಾವಿರ ಶಾಲೆಗಳನ್ನು ಉಭಯ ಮಾಧ್ಯಮ ಶಾಲೆಗಳಾಗಿ ಬದಲಾಯಿಸುವುದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಶಾಲಾ ಶಿಕ್ಷಣ ಆಯೋಗ ಎಂಬ ಸ್ವಾಯತ್ತ ಸಂಸ್ಥೆ ಸ್ಥಾಪನೆ, 1995ರಿಂದ 2000ದವರೆಗೆ ಪ್ರಾರಂಭಗೊಂಡ ಕನ್ನಡ ಮಾಧ್ಯಮದ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಹಾಗೂ ರಾಜ್ಯದ 25 ಗ್ರಾಮ ಪಂಚಾಯತಿಗಳು ಮತ್ತು ಬಿಬಿಎಂಪಿ ವ್ಯಾಪ್ತಿಯ 25 ವಾರ್ಡುಗಳಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ 5ರಿಂದ 12ನೇ ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪಂಚಾಯಿತಿ ಅಥವಾ ವಾರ್ಡ್ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ADVERTISEMENT

ಈ ಪ್ರಸ್ತಾವಗಳಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ನೀಡಿದರೆ ಮುಂದಿನ ಬಜೆಟ್‍ನಲ್ಲಿ ಈ ಅಂಶಗಳು ಸೇರ್ಪಡೆಯಾಗಿ ಸೂಕ್ತ ಅನುದಾನವೂ ದೊರೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಆರ್ಥಿಕ ಪರಿಸ್ಥಿತಿ ಗಮನದಲ್ಲಿರಲಿ:

‘ಕೋವಿಡ್ ನಂತರದ ಸಂದರ್ಭದಲ್ಲಿ ರಾಜ್ಯದ ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ವಿದ್ಯಾರ್ಥಿ ಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು‌ ಯೋಜನೆ ರೂಪಿಸಬೇಕು’ ಎಂದು ಸುರೇಶ್‌ಕುಮಾರ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್, ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕಿ‌ ದೀಪಾ ಚೋಳನ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಆರ್. ಸ್ನೇಹಲ್, ಲೋಕ ಶಿಕ್ಷಣ ನಿರ್ದೇಶಕಿ‌‌ ಸುಷ್ಮಾ ಗೋಡಬೋಲೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.