ADVERTISEMENT

ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಅವಕಾಶ ಇಲ್ಲ: ಸಚಿವ ಸುರೇಶ್‌

ಶಿಕ್ಷಣ ಇಲಾಖೆ: 5,099 ಕಡತ ವಿಲೇವಾರಿಗೆ ಬಾಕಿ: ಸಚಿವ ಸುರೇಶ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:50 IST
Last Updated 16 ಅಕ್ಟೋಬರ್ 2019, 19:50 IST
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಬುಧವಾರ ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಕಡತಗಳನ್ನು ಪರಿಶೀಲಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಬುಧವಾರ ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಕಡತಗಳನ್ನು ಪರಿಶೀಲಿಸಿದರು.   

ಬೆಂಗಳೂರು:ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ ಕಟ್ಡುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಉಪನ್ಯಾಸಕರ ಬೇಡಿಕೆಗಳಿಗೆ ಮೊದಲಾಗಿಯೇ ಸ್ಪಂದಿಸಿ, ಮೌಲ್ಯಮಾಪನ ಬಹಿಷ್ಕಾರ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

ಇಲಾಖೆಯಲ್ಲಿ ಕಡತ ವಿಲೇವಾರಿ ಕುರಿತಂತೆ ಬುಧವಾರ ಖುದ್ದಾಗಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಸಾಮೂಹಿಕ ನಕಲು ತಡೆಯಲು ಈ ಬಾರಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಇದೇ30 ಮತ್ತು 31ರಂದು ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಡಿಡಿಪಿಐ, ಬಿಇಒಗಳ ಜತೆಗೆ ಸಭೆ ನಡೆಸಲಾಗುವುದು‘ ಎಂದು ತಿಳಿಸಿದರು.

ADVERTISEMENT

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 5,099 ಕಡತಗಳು ವಿಲೇವಾರಿಗೆ ಬಾಕಿ ಇವೆ. ಕಾಲಮಿತಿಯಲ್ಲಿ ಇವುಗಳ ವಿಲೇವಾರಿಗೆ ಸೂಚಿಸಲಾಗಿದೆ.1,323 ಕಡತಗಳು ಎರಡು ವರ್ಷಕ್ಕಿಂತ ಮಿಕ್ಕಿವಿಲೇವಾರಿಗೆ ಬಾಕಿ ಇವೆ, ಲೋಕಾಯುಕ್ತ, ಕೆಎಟಿ, ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಉಳಿದಿದ್ದರಿಂದ ವಿಳಂಬವಾಗಿದೆ ಎಂದರು.

ಮುದ್ರಕರಿಗೆ ಹಣ ಶೀಘ್ರ
ನೆರೆ ಹಾವಳಿಯಿಂದ ತೊಂದರೆಗೆ ಒಳಗಾಗಿರುವ ಚಿಕ್ಕೋಡಿಗೆ ಶೀಘ್ರ ಪಠ್ಯಪುಸ್ತಕ ಮುದ್ರಿಸಿ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ. ಮುದ್ರಕರಿಗೆ ಬಾಕಿ ಉಳಿದ ಹಣವನ್ನು ಶೀಘ್ರ ಪಾವತಿಸಲಾಗುವುದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌. ಆರ್‌. ಉಮಾಶಂಕರ್‌ ಹೇಳಿದರು.

ನೆರೆಯಿಂದ ಹಾನಿಗೊಳಗಾಗಿರುವ ಶಾಲೆಗಳ ದುರಸ್ತಿಗಾಗಿ ಸಿಆರ್‌ಎಫ್‌ ನಿಧಿಯಿಂದ ₹ 500 ಕೋಟಿ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸುವುದು ಸದ್ಯ ಕಷ್ಟ, ಆದರೆ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು, ದುರಸ್ತಿಗೆ ಇರುವ ₹ 2 ಲಕ್ಷದ ಮಿತಿಯನ್ನು ಕೊಂಚ ಸಡಿಲಿಸುವ ವಿಚಾರವೂ ಇದೆ ಎಂದುಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.