ADVERTISEMENT

ಪಂಚಾಯತ್‌ ಕ್ಷೇತ್ರ ಪುನರ್‌ವಿಂಗಡಣೆಗೆ ಆಯೋಗ: ವಿರೋಧ

ಕಾಂಗ್ರೆಸ್‌ ಸಭಾತ್ಯಾಗದ ಮಧ್ಯೆಯೇ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 19:59 IST
Last Updated 16 ಸೆಪ್ಟೆಂಬರ್ 2021, 19:59 IST

ಬೆಂಗಳೂರು: ಮೂರೂ ಹಂತದ ಪಂಚಾಯತ್‌ ವ್ಯವಸ್ಥೆಯಡಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂದಕ್ಕೆಪಡೆದು, ‘ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ’ ಸ್ಥಾಪಿಸಿ, ಅದಕ್ಕೆ ಅಧಿಕಾರ ನೀಡುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ’ ಕಾಂಗ್ರೆಸ್‌ ಸಭಾತ್ಯಾಗ ಮತ್ತು ಜೆಡಿಎಸ್‌ ವಿರೋಧದ ಮಧ್ಯೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ಪಡೆಯಿತು.

ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ಚುನಾವಣೆಗಳನ್ನು ಮುಂದೂಡುವ ಉದ್ದೇಶದಿಂದಲೇ ಸಂವಿಧಾನಕ್ಕೆ ವಿರೋಧವಾಗಿ ಈ ಮಸೂದೆಯನ್ನು ಮಂಡಿಸಲಾಗಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಮಸೂದೆಯನ್ನು ಹಿಂದಕ್ಕೆ ಪಡೆಯಲು ಒಪ್ಪದ ಕಾರಣ, ಅದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್‌ ಸದಸ್ಯರು ಸದನದಿಂದ ಹೊರ ನಡೆದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಮಸೂದೆಯನ್ನು ಮಂಡಿಸಿರುವ ಉದ್ದೇಶವೇ ಪ್ರಶ್ನಾರ್ಹವಾಗಿದೆ. ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ನೀವು ಹಿಂದೆಯೇ ಏಕೆ ಈ ಮಸೂದೆ ಮಂಡಿಸಿಸಲಿಲ್ಲ. ಐದು ವರ್ಷದೊಳಗೆ ಚುನಾವಣೆ ನಡೆಸಬೇಕು. ಕೊನೆ ಹಂತದಲ್ಲಿ ಮಸೂದೆ ತಂದಿರುವುದು ಚುನಾವಣೆ ಮುಂದೂಡುವ ಏಕೈಕ ಉದ್ದೇಶ ಬಿಟ್ಟು ಬೇರೆ ಏನೂ ಇಲ್ಲ’ ಎಂದು ಹೇಳಿದರು.

ADVERTISEMENT

‘ನಿಮ್ಮ ಈ ತಿದ್ದುಪಡಿಯನ್ನು ಹೈಕೋರ್ಟ್‌ ಒಪ್ಪುವುದಿಲ್ಲ. ಅದು ಗೊತ್ತಿದ್ದೇ, ನ್ಯಾಯಾಲಯ ಯಾವುದೇ ರೀತಿಯ ತೀರ್ಮಾನ ಕೊಡದ ಹಾಗೆ ಮಾಡಲು ಮಸೂದೆ ತಂದಿದ್ದಿರಿ. ಪ್ರತ್ಯೇಕ ಆಯೋಗ ರಚನೆ ಮಾಡುವ ಮೂಲಕ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿಯಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರ ಹೊರಟಿದೆ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಮಾತನಾಡಿ, ‘ಹಿಂದೆ ನಮ್ಮ ಸರ್ಕಾರ ಇದ್ದಾಗ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಲೋಪ ಆಗುತ್ತಿದೆ ಎಂಬ ಕಾರಣಕ್ಕೆ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಿದೆವು. ಈಗ ನೀವು ಸಂವಿಧಾನಕ್ಕೆ ವಿರುದ್ಧವಾದ, ಪ್ರತಿಗಾಮಿ ಮಸೂದೆ ತಂದಿದ್ದೀರಿ. ಜನರನ್ನು ಅಧಿಕಾರಯುಕ್ತರನ್ನಾಗಿ ಮಾಡಬೇಕೆ ಹೊರತು ಭಿಕ್ಷೆ ಬೇಡುವಂತೆ ಮಾಡಬೇಡಿ’ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಮೀಸಲಾತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆಗೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟ್‌ನಲ್ಲಿ ದಾಖಲಾಗಿವೆ. ಇದೇ 20 ರ ಒಳಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಹೈಕೋರ್ಟ್‌ಗೆ ಸಲ್ಲಿಸಬೇಕಾದ ಗಡುವು ನೀಡಿದೆ ಎಂದು ಸಮಜಾಯಿಷಿ ನೀಡಿದರು.

ಚರ್ಚೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ, ಕೆ.ಆರ್‌.ರಮೇಶ್‌ ಕುಮಾರ್‌, ಯತೀಂದ್ರ ಸಿದ್ದರಾಮಯ್ಯ, ಜೆಡಿಎಸ್‌ನ ಎಚ್‌.ಡಿ. ರೇವಣ್ಣ, ಶಿವಲಿಂಗೇಗೌಡ, ಮುಂತಾದವರು ಮಾತನಾಡಿದರು.

ನಿವೃತ್ತ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆ

ಕರ್ನಾಟಕ ಪಂಚಾಯತ್‌ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಕ್ಷೇತ್ರದ ಒಬ್ಬ ತಜ್ಞ, ಗ್ರಾಮೀಣಾಭಿವೃದ್ಧಿ, ವಿಕೇಂದ್ರೀಕರಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ನಿವೃತ್ತ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ. ಅಲ್ಲದೆ ಇಬ್ಬರು ಪದ ನಿಮಿತ್ತ ಸದಸ್ಯರು ಇರುತ್ತಾರೆ. ಈ ಆಯೋಗ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.