ADVERTISEMENT

ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಕಾಡಾನೆ ದಾಳಿ

ಕಣ್ಣಂಗಾಲದಲ್ಲಿ ಕಾರ್ಮಿಕರ ಗಾಯಗೊಳಿಸಿದ ಆನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 13:20 IST
Last Updated 26 ಜೂನ್ 2019, 13:20 IST
ಕಾಡಾನೆ ದಾಳಿಗೆ ಒಳಗಾದ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ 
ಕಾಡಾನೆ ದಾಳಿಗೆ ಒಳಗಾದ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ    

ವಿರಾಜಪೇಟೆ: ಸಮೀಪದ ಬಿಟ್ಟಂಗಾಲದಲ್ಲಿ ಬುಧವಾರಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಕಾಡಾನೆ ದಾಳಿ ನಡೆಸಿದ್ದು ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ತಾಲ್ಲೂಕಿನ ಬಿಟ್ಟಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಚಂದನ್ (13) ಕಾಡಾನೆ ದಾಳಿಗೆ ಒಳಗಾದ ವಿದ್ಯಾರ್ಥಿ.

ಬೆಳಿಗ್ಗೆ 8.40ರ ಸುಮಾರಿಗೆ ಇತರೆ ಸ್ನೇಹಿತರೊಂದಿಗೆ ಶಾಲೆಗೆ ತೆರಳುತ್ತಿರುವಾಗ ಕಾಫಿ ತೋಟದಿಂದ ಏಕಾಏಕಿ ಬಂದ ಕಾಡಾನೆಯೊಂದು ದಾಳಿ ಮಾಡಿದೆ. ಇತರೆ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ADVERTISEMENT

ಚಂದನ್ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, 8 ಹೊಲಿಗೆ ಹಾಕಲಾಗಿದೆ. ಹೊಟ್ಟೆ, ಕೈ ಹಾಗೂ ಕಾಲಿಗೂ ತೀವ್ರ ಗಾಯವಾಗಿದೆ. ವಿರಾಜಪೇಟೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಸ್ಥರ ಆಕ್ರೋಶ:‘ಬಿಟ್ಟಂಗಾಲ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು ಅರಣ್ಯ ಅಧಿಕಾರಿಗಳು ಆನೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಗ್ರಾಮಸ್ಥ ಕೋಲತಂಡ ರಘು ಮಾಚಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದು ದಾಳಿ:ಸಿದ್ದಾಪುರ ಕಣ್ಣಂಗಾಲದಲ್ಲೂ ಕಾಡಾನೆ ಹಿಂಡು ದಾಳಿ ನಡೆಸಿದ್ದು ಕಾರ್ಮಿಕರಾದ ಕಮಲಾ (51) ಹಾಗೂ ಅಮ್ಮಾಳು (65) ಗಾಯಗೊಂಡಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.