ADVERTISEMENT

ಒಡಿಶಾ ಮಾಜಿ ಶಾಸಕ ಇ.ಡಿ ಬಲೆಗೆ: ₹133 ಕೋಟಿ ಜಪ್ತಿ

ಪಿಟಿಐ
Published 13 ಮೇ 2022, 6:04 IST
Last Updated 13 ಮೇ 2022, 6:04 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ:ಅನಧಿಕೃತ ಗಣಿಗಾರಿಕೆಗೆ ಸಂಬಂಧಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಒಡಿಶಾದ ಮಾಜಿ ಶಾಸಕ ಜಿತೇಂದ್ರನಾಥ್ ಪಟ್ನಾಯಕ್ ಅವರು ಹೊಂದಿದ್ದ ₹ 133 ಕೋಟಿಗೂ ಹೆಚ್ಚು ಮೊತ್ತದನಿಶ್ಚಿತ ಠೇವಣಿ ಮತ್ತು ನಗದು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ತಿಳಿಸಿದೆ.

ಒಡಿಶಾದ ಕಿಯೋಂಜರ್‌ ಜಿಲ್ಲೆಯ ಜೋಡದಲ್ಲಿ ಜಿತೇಂದ್ರನಾಥ್ ಅವರ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ, ₹70 ಲಕ್ಷ ನಗದು ಮತ್ತು 124 ನಿಶ್ಚಿತ ಠೇವಣಿಗಳಿಂದ ₹133.17 ಕೋಟಿ,ಇದಕ್ಕೆ ಸಂಬಂಧಿಸಿದ ದಾಖಲೆ ಮತ್ತು ಡಿಜಿಟಲ್‌ ಸಾಕ್ಷ್ಯಗಳನ್ನು ಜಪ‍್ತಿ ಮಾಡಲಾಗಿದೆ. ಜಿತೇಂದ್ರನಾಥ್‌ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೇ,ಅಕ್ರಮ ಗಣಿಗಾರಿಕೆಯಿಂದ ಹಣ ಸಂಪಾದನೆ ಮಾಡಿದ್ದರು’ ಎಂದು ಇ.ಡಿ ಆರೋಪಿಸಿದೆ.

ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಸಂಬಂಧ ಜಿತೇಂದ್ರ ಪಟ್ನಾಯಕ್‌ ವಿರುದ್ಧ ಒಡಿಶಾ ವಿಚಕ್ಷಣ ಘಟಕವು ಎಫ್‌ಐಆರ್‌ ದಾಖಲಿಸಿ, ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿತ್ತು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿ, ಸರ್ಕಾರದ ಬೊಕ್ಕಸಕ್ಕೆ ₹130 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ADVERTISEMENT

‘ಆರೋಪಿತರು ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದ ಅಷ್ಟೂ ಮೊತ್ತವನ್ನು ಸಂಪೂರ್ಣ ವಸೂಲು ಮಾಡುವಲ್ಲಿ ಯಶಸ್ಸು ಸಾಧಿಸಲಾಗಿದೆ’ ಎಂದು ಇ.ಡಿ ಹೇಳಿದೆ.

ಜಿತೇಂದ್ರನಾಥ್‌ ಪಟ್ನಾಯಕ್ ಅವರು ಪ್ರತಿನಿಧಿಸುತ್ತಿದ್ದ ಅವರ ಕ್ಷೇತ್ರದಲ್ಲಿ ‘ಜಿತು ಪಟ್ನಾಯಕ್’ ಎಂದೇ ಹೆಸರುವಾಸಿಯಾಗಿದ್ದರು. ಚಂಪೂವಾ ವಿಧಾನಸಭಾ ಕ್ಷೇತ್ರದಿಂದ ಅವರು ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.