ADVERTISEMENT

ಹರಿಹರದಲ್ಲಿ ಎಥೆನಾಲ್‌ ಘಟಕ

ಎಂಆರ್‌ಪಿಎಲ್‌ನಿಂದ ಯೋಜನೆ: 2021ರಲ್ಲಿ ಆರಂಭ ಸಾಧ್ಯತೆ

ಚಿದಂಬರ ಪ್ರಸಾದ್
Published 8 ನವೆಂಬರ್ 2018, 20:33 IST
Last Updated 8 ನವೆಂಬರ್ 2018, 20:33 IST

ಮಂಗಳೂರು: ತೈಲ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರ್ಯಾಯ ಇಂಧನಗಳತ್ತ ದೃಷ್ಟಿ ಹರಿಸಿದ್ದು, ತೈಲೋತ್ಪನ್ನ ಕಂಪನಿಗಳು ಎಥೆನಾಲ್‌ ಉತ್ಪಾದನೆಗೆ ಮುಂದಾಗಿವೆ. ಈ ಪ್ರಯತ್ನದ ಅಂಗವಾಗಿ ಮಂಗಳೂರು ರಿಫೈನರಿ ಆಂಡ್‌ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌), ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 2ಜಿ ಎಥೆನಾಲ್‌ ಉತ್ಪಾದನಾ ಘಟಕ ಆರಂಭಿಸಲು ಸಿದ್ಧತೆ ನಡೆಸಿದೆ.

ಈಗಾಗಲೇ ಹರಿಹರದಲ್ಲಿ ಜಾಗವನ್ನು ಎಂಆರ್‌ಪಿಎಲ್‌ಗೆ ಹಸ್ತಾಂತರಿಸಲಾಗಿದ್ದು, ತಂತ್ರಜ್ಞಾನದ ಕುರಿತು ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2021 ರ ವೇಳೆಗೆ ಈ ಘಟಕದ ಕಾರ್ಯಾರಂಭ ಆಗುವ ಸಾಧ್ಯತೆ ಇದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಎಂಆರ್‌ಪಿಎಲ್‌ ಸದ್ಯಕ್ಕೆ ರಾಜ್ಯದ ಶೇ 95ರಷ್ಟು ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಪೂರೈಸುತ್ತಿದೆ. ಈ ಮಧ್ಯೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇನ್ನೊಂದೆಡೆ ಕಚ್ಚಾತೈಲವನ್ನು ಪೂರೈಸುವ ರಾಷ್ಟ್ರಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಇರಾನ್‌ ಮೇಲೆ ಅಮೆರಿಕದ ನಿರ್ಬಂಧದಿಂದಾಗಿ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ, ಬರುವ ದಿನಗಳಲ್ಲಿ ಕಚ್ಚಾ ತೈಲ ಪೂರೈಕೆ ಸ್ಥಗಿತವಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ADVERTISEMENT

ಇದನ್ನು ಗಮನದಲ್ಲಿಟ್ಟುಕೊಂಡು ಎಂಆರ್‌ಪಿಎಲ್‌ ಹೊಸ ಪ್ರಯತ್ನಗಳನ್ನು ನಡೆಸುತ್ತಿದೆ. ಸಕ್ಕರೆ ಅಂಶವಿರುವ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಗೋದಿ, ಜೋಳ ಮತ್ತಿತರ ಬೆಳೆಗಳಿಂದ ಎಥೆನಾಲ್‌ ಉತ್ಪಾದಿಸಬಹುದು. ಇವು ಯಥೇಚ್ಛವಾಗಿ ಬೆಳೆಯುವ ಹರಿಹರ ಪ್ರದೇಶ ಸ್ಥಾವರ ಸ್ಥಾಪನೆಗೆ ಸೂಕ್ತ ಎಂದು ಪರಿಗಣಿಸಲಾಗಿದೆ. ಕೆಐಎಡಿಬಿಯಿಂದ ಈಗಾಗಲೇ ಸುಮಾರು 40 ಎಕರೆ ಜಮೀನನ್ನು ಎಂಆರ್‌ಪಿಎಲ್‌ ಪಡೆದುಕೊಂಡಿದೆ. ಅಲ್ಲದೇ ರಾಜ್ಯ ಸರ್ಕಾರದಿಂದಲೂ ಯೋಜನೆಗೆ ಮಂಜೂರಾತಿ ದೊರೆತಿದೆ.

ರಾಜ್ಯದ ಒಟ್ಟು 85 ಸಕ್ಕರೆ ಕಾರ್ಖಾನೆಗಳಲ್ಲಿ ಸುಮಾರು 68 ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 15ರಲ್ಲಿ ಮಾತ್ರ ಎಥೆನಾಲ್‌ ಉತ್ಪಾದಿಸಲಾಗುತ್ತಿದೆ. ಈಗ ರಾಜ್ಯದಲ್ಲಿ ಸುಮಾರು 7.50 ಲಕ್ಷ ಲೀಟರ್‌ ಎಥೆನಾಲ್‌ ಉತ್ಪಾದನೆ ಆಗುತ್ತಿದ್ದು, ಎಥೆನಾಲ್‌ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರದ ನಿರ್ದೇಶನ ನೀಡಿದೆ. ಹೀಗಾಗಿ ಜೋಳ, ಗೋದಿಯಿಂದಲೂ ಎಥೆನಾಲ್‌ ಉತ್ಪಾದನೆಗೆ ಎಂಆರ್‌ಪಿಎಲ್‌ ಮುಂದಾಗಿದೆ.

ಸದ್ಯಕ್ಕೆ ಪೆಟ್ರೋಲ್‌ಗೆ ಶೇ 5ರಷ್ಟು ಎಥೆನಾಲ್‌ ಮಿಶ್ರಣಕ್ಕೆ ಅವಕಾಶವಿದ್ದು, ಈ ಮಿತಿಯನ್ನು ಶೇ 10ಕ್ಕೆ ಏರಿಸುವ ಚಿಂತನೆ ಕೇಂದ್ರ ಸರ್ಕಾರದ್ದು. ಎಥೆನಾಲ್‌ ಬಳಕೆ ಅಧಿಕವಾದಂತೆ ಕಚ್ಚಾ ತೈಲ ಆಮದು ಕಡಿಮೆಯಾಗಲಿದ್ದು, ತೈಲ ಬೆಲೆ ನಿಯಂತ್ರಣ ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

**

ಸಂಸ್ಕರಣೆಗೆ ಸೀಮಿತ ಬೇಡ

ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು ಕಚ್ಚಾತೈಲವನ್ನು ವಿದೇಶದಿಂದ ತರಿಸಿ, ಸಂಸ್ಕರಿಸಿ ವಿತರಿಸುವುದಕ್ಕಷ್ಟೇ ಸೀಮಿತವಾಗಬಾರದು. ಕಡ್ಡಾಯವಾಗಿ ಪರ್ಯಾಯ ಇಂಧನ ಉತ್ಪಾದನೆಗೂ ಒತ್ತು ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

2020ರೊಳಗೆ ಉತ್ಪಾದನೆ ಚಟುವಟಿಕೆ ಆರಂಭಿಸುವಂತೆ ಕೇಂದ್ರ ಸರ್ಕಾರ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ತೈಲ ಕಂಪನಿಗಳು ದೇಶದ ವಿವಿಧೆಡೆ ಸ್ಥಳೀಯ ಕೃಷಿ ಆಧಾರಿತ ಕಚ್ಚಾ ಸಾಮಗ್ರಿ ಸಿಗುವ ಕಡೆ ಎಥೆನಾಲ್ ಘಟಕ ಆರಂಭಿಸಲು ಮುಂದಾಗಿವೆ. ಇತ್ತೀಚೆಗೆ ಐಒಸಿಎಲ್‌ ಒಡಿಶಾದಲ್ಲಿ 2ಜಿ ಎಥೆನಾಲ್‌ ಘಟಕ ನಿರ್ಮಿಸಿದೆ.

**

ಹರಿಹರದಲ್ಲಿ ₹966 ಕೋಟಿ ವೆಚ್ಚದಲ್ಲಿ ಎಥೆನಾಲ್‌ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ತಂತ್ರಜ್ಞಾನದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

-ಶಶಿಶಂಕರ, ಎಂಆರ್‌ಪಿಎಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.