ADVERTISEMENT

ವರ್ಷಕ್ಕೆ ಐದು ಕೋಟಿ ಸಸಿ ನೆಡುವ ಗುರಿ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 16:29 IST
Last Updated 23 ಜೂನ್ 2023, 16:29 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ    

ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಐದು ಕೋಟಿ ಸಸಿಗಳನ್ನು ನೆಡಲಾಗುವುದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ 25 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಅರಣ್ಯ ಪ್ರದೇಶದ ನಿರ್ವಹಣೆ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜತೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದ ಬಳಿಕ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇಕಡ 33ರಷ್ಟು ಅರಣ್ಯ ಪ್ರದೇಶ ಇರಬೇಕು. ರಾಜ್ಯದಲ್ಲಿ ಈಗ ಶೇ 20.19ರಷ್ಟು ಅರಣ್ಯ ಪ್ರದೇಶವಿದೆ. ಅರಣ್ಯ ಪ್ರದೇಶ ಹೆಚ್ಚಿಸಲು ಹೆಚ್ಚಿನ ಗಿಡಗಳನ್ನು ನೆಡಲಾಗುವುದು’ ಎಂದರು.

‘ಗಿಡಗಳನ್ನು ನೆಡುವುದಕ್ಕೆ ಸೀಮಿತವಾಗಿ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ. ನೆಟ್ಟ ಗಿಡಗಳ ಸ್ಥಿತಿಗತಿ ಅರಿಯಲು ‘ಜಿಯೋ ಟ್ಯಾಗಿಂಗ್‌’ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. ಆ ಮೂಲಕ ಗಿಡಗಳ ಲೆಕ್ಕ ಪರಿಶೋಧನೆ ನಡೆಸಲಾಗುವುದು. ನೆಟ್ಟ ಗಿಡಗಳು ಮರವಾಗಿ ಬೆಳೆಯುವಂತೆ ನಿಗಾ ಇರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಜುಲೈ 1ರಿಂದ ಏಳು ದಿನಗಳ ಕಾಲ ರಾಜ್ಯದಾದ್ಯಂತ ವನಮಹೋತ್ಸವ ಆಚರಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯಲಿದ್ದು, ಸರ್ಕಾರದ ಎಲ್ಲ ಇಲಾಖೆಗಳೂ ಭಾಗವಹಿಸಲಿವೆ. ಅರಣ್ಯ ಇಲಾಖೆಯಿಂದಲೇ 2.5 ಕೋಟಿ ಗಿಡಗಳನ್ನು ನೆಡಲಾಗುವುದು. ವಿವಿಧ ಇಲಾಖೆಗಳು, ಸಂಘ, ಸಂಸ್ಥೆಗಳಿಂದ 2.5 ಕೋಟಿ ಗಿಡಗಳನ್ನು ನೆಡುವ ಗುರಿ ಇದೆ ಎಂದರು.

ದರ ಇಳಿಕೆ: ಅರಣ್ಯ ಇಲಾಖೆಯಿಂದ ರೈತರಿಗೆ ನೀಡುವ ಗಿಡಗಳ ದರವನ್ನು ತಾವು ಅಧಿಕಾರ ವಹಿಸಿಕೊಳ್ಳುವ ಮೊದಲೇ ಹೆಚ್ಚಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಪರಿಶೀಲನೆ ನಡೆಸಿ ದರ ಇಳಿಕೆ ಮಾಡಲಾಗಿದೆ ಎಂದು ಖಂಡ್ರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.