ADVERTISEMENT

ದುಷ್ಟ ಶಕ್ತಿಗಳಿಗೆ ಬಾಲಬಿಚ್ಚಲು ಬಿಡಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ವರ್ಷ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:37 IST
Last Updated 30 ಮೇ 2025, 15:37 IST
ರಾಜ್ಯದ ಪ್ರಗತಿಗೆ ಸಂಬಂಧಿಸಿದಂತೆ ವಿಧಾನಸೌಧದದಲ್ಲಿ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡುತ್ತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಾರೆ.
ರಾಜ್ಯದ ಪ್ರಗತಿಗೆ ಸಂಬಂಧಿಸಿದಂತೆ ವಿಧಾನಸೌಧದದಲ್ಲಿ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡುತ್ತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಾರೆ.   

ಬೆಂಗಳೂರು: ‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜನ ವಿರೋಧಿ ದುಷ್ಟ ಶಕ್ತಿಗಳು ಬಾಲಬಿಚ್ಚಲು ಅವಕಾಶ ನೀಡಬಾರದು. ಎಷ್ಟೇ ಪ್ರಭಾವಿಯಾಗಿದ್ದರೂ ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧ ಸರ್ಕಾರವೇ ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು, ಪೊಲೀಸ್‌ ಅಧಿಕಾರಿಗಳ ಜತೆ ನಡೆದ ರಾಜ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಜಿಲ್ಲೆಗಳಲ್ಲೂ ಅಧಿಕಾರಿಗಳು ತಮ್ಮ ಸ್ಥಾನದ ಮಹತ್ವ, ಪ್ರಭಾವ ಅರಿತು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು. ಜನರ ಆಶಯಗಳಿಗೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.

ಜನರ ತೆರಿಗೆ ಹಣದಲ್ಲಿ ಅಧಿಕಾರಿಗಳಿಗೆ ವೇತನ, ಕಾರು, ಬಂಗಲೆ ಮತ್ತಿತರ ಸವಲತ್ತು ನೀಡುತ್ತಿದ್ದೇವೆ. ಜನರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದ ಮೂಲ ಆಶಯ ಸಾಕಾರಗೊಳಿಸಬೇಕು. ಶಾಂತಿ ಸುವ್ಯವಸ್ಥೆಗೆ ಭಂಗವಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. 

ADVERTISEMENT

‘ಪ್ರಸಕ್ತ ವರ್ಷ 700 ಬಾಲ್ಯ ವಿವಾಹ ನಡೆದಿವೆ. ಹಲವರು ಬಾಲ್ಯದಲ್ಲೇ ತಾಯಂದಿರಾಗಿದ್ದಾರೆ. ಘಟನೆಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಕಾನೂನನ್ನು ಪರಿಣಾಮಕಾರಿಯಾಗಿ ಏಕೆ ಬಳಸಿಲ್ಲ? ನೀವೆ ದಕ್ಷತೆಯಿಂದ ಕೆಲಸ ಮಾಡದಿದ್ದರೆ ಅಧೀನ ಅಧಿಕಾರಿಗಳಿಂದ ಹೇಗೆ ನಿರೀಕ್ಷೆ ಮಾಡುತ್ತೀರಿ’ ಎಂದು ಪ್ರಶ್ನಿಸಿದರು. 

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡಬೇಕು. ವರದಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು. ಶಾಲೆ, ಆಸ್ಪತ್ರೆ, ಅಂಗನವಾಡಿ, ಸ್ಮಶಾನ, ಖಬರ್‌ಸ್ಥಾನಗಳಿಗೆ ಕೂಡಲೇ ನಿವೇಶನ ಒದಗಿಸಬೇಕು. 1,858 ಗ್ರಾಮೀಣ ಅಂಗನವಾಡಿಗಳಿಗೆ 5,187 ನಗರ ಪ್ರದೇಶದ ಅಂಗನವಾಡಿಗಳಿಗೆ ಹಾಗೂ 14 ಸರ್ಕಾರಿ ಕಾಲೇಜುಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸೂಚಿಸಿದರು.

ಅನರ್ಹ ಪಡಿತರ ಚೀಟಿ, ಕ್ರಮಕ್ಕೆ ಸೂಚನೆ: 

ರಾಜ್ಯದಲ್ಲಿ ಸುಮಾರು ಶೇ 74ರಷ್ಟು ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದಾರೆ. ಅನರ್ಹರನ್ನು ಗುರುತಿಸಿ, ಬಿಪಿಎಲ್‌ ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸಬೇಕು ಎಂದರು. 

ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಕ್ರಮ: 

ಹೊಸದಾಗಿ ಘೋಷಣೆ ಮಾಡಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳನ್ನು ತಕ್ಷಣ ಆರಂಭಿಸಬೇಕು. 186 ಇಂದಿರಾ ಕ್ಯಾಂಟೀನ್‌ಗಳಲ್ಲಿ 103 ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. 43 ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಣೆ  ಆರಂಭವಾಗಿದೆ. ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು. 

4,866 ಕೆರೆಗಳ ಒತ್ತುವರಿ ತೆರವಿಗೆ ಸೂಚನೆ

ರಾಜ್ಯದಲ್ಲಿ 10931 ಕೆರೆಗಳು ಒತ್ತುವರಿಯಾಗಿದ್ದು ಇದುವರೆಗೆ 6065 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಉಳಿದ 4866 ಕೆರೆಗಳ ಒತ್ತುವರಿ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು. ರಾಜ್ಯದಲ್ಲಿನ ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಬೇಕು. ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಹೇಳಿದರು.

ಫಲಿತಾಂಶ ವೃದ್ಧಿಗೆ ಕ್ರಮ:

ಸರ್ಕಾರಿ ಶಾಲೆಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡಿದರೂ ಎಸ್ಎಸ್ಎಲ್‌ಸಿ ಪಿಯು ಫಲಿತಾಂಶ ಕಳಪೆಯಾಗಿಲು ಕಾರಣವೇನು ಎನ್ನುವ ಕುರಿತು ಆತ್ಮಾವಲೋಕನ ನಡೆಸಬೇಕು. ಫಲಿತಾಂಶ ಸುಧಾರಣೆಗೆ  ಆಯಾ ಜಿಲ್ಲಾಧಿಕಾರಿ ಹಾಗೂ ಸಿಇಒಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ರೈತರ ಆತ್ಮಹತ್ಯೆ ಪರಿಹಾರ ವಿಳಂಬ ಸಲ್ಲದು:

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ನೀಡಲು ವಿಳಂಬ ಮಾಡಬಾರದು. ಮೃತ ರೈತರ 13 ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಬೇಕು ಎಂದರು. 

ನಿವೃತ್ತ ಸೈನಿಕರ ಕಲ್ಯಾಣ ನಿಗಮದ ರೂಪುರೇಷೆಗಳನ್ನು ಸಿದ್ಧಪಡಿಸಿ, ಮುಂದಿನ ಸಚಿವ ಸಂಪುಟ ಸಭೆಯ ಮುಂದೆ ಇರಿಸಿ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.