ADVERTISEMENT

ಇಡಬ್ಲ್ಯುಎಸ್‌ ಶೇ 10 ಮೀಸಲಾತಿ ಹಿಂಪಡೆಯಬೇಕು: ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:32 IST
Last Updated 8 ನವೆಂಬರ್ 2022, 19:32 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ಬೆಂಗಳೂರು: ‘ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು, ದೇಶದಲ್ಲಿ ಅನುಸರಿಸುತ್ತಿರುವ ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಈ ಮೀಸಲಾತಿಯನ್ನು ಹಿಂಪಡೆಯಬೇಕು’ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

‘ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನದ ಆಧಾರದಲ್ಲಿ ಮೀಸಲಾತಿ ನೀಡಬೇಕು, ಆರ್ಥಿಕ ಸ್ಥಿತಿ ಮಾನದಂಡವಲ್ಲ. ಜನರ ಆರ್ಥಿಕ ಸ್ಥಿತಿಯು ಕಾಲಕಾಲಕ್ಕೆ ಬದಲಾಗುತ್ತದೆ. ಹೀಗಾಗಿ, ಈ ಮೀಸಲಾತಿ ಎಂದಿಗೂ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವುದಿಲ್ಲ’ ಎಂದು ಒಕ್ಕೂಟದಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಈ ತೀರ್ಪಿಗೆ ನಮ್ಮ ಆಕ್ಷೇಪವಿದೆ. ಹೀಗಾಗಿ, ಕಾನೂನು ತಜ್ಞರ ಜೊತೆ ಸಮಾಲೋಚಿಸಿ ತೀರ್ಪಿನ ಕುರಿತು ವಿವರವಾದ ವಿಶ್ಲೇಷಣೆಯ ಬಳಿಕ ಮುಂದೆ ಕೈಗೊಳ್ಳಬೇಕಾದ ಕಾನೂನಾತ್ಮಕ ಕ್ರಮಗಳ ಬಗ್ಗೆ ನಿರ್ಧರಿಸುತ್ತೇವೆ. ಸಾಮಾಜಿಕ ನ್ಯಾಯವನ್ನು ಕಾಪಾಡಿ, ಆ ಧ್ವನಿಯನ್ನು ಪ್ರತಿಧ್ವನಿಸಲು ಸಮಾನ ಮನಸ್ಕ ಹೋರಾಟಗಾರರು ಒಂದಾಗುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಇಡಬ್ಲ್ಯುಎಸ್‌ ಶೇ 10 ಮೀಸಲಾತಿಯ ಉದ್ದೇಶಕ್ಕಾಗಿ, ಆರ್ಥಿಕವಾಗಿ ದುರ್ಬಲ ವರ್ಗಗಳೆಂದು ಕರೆಯಲ್ಪಡುವವರು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಹೊರಗಿಡುತ್ತಾ. ಸಂವಿಧಾನದ ಅಡಿಯಲ್ಲಿ ಸಮಾನತೆಯ ಸಂಹಿತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯನ್ನು ಇದು ತಲೆಕೆಳಗು ಮಾಡಿದೆ. ಆದ್ದರಿಂದ, ಈ ತಿದ್ದುಪಡಿಯನ್ನು ಹಿಂದೆತೆಗೆದುಕೊಳ್ಳಬೇಕು ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ ಇಡಬ್ಲ್ಯುಎಸ್‌ಗೆ ಒದಗಿಸಿದ ಶೇ 10 ಮೀಸಲಾತಿಯನ್ನು ತಕ್ಷಣ ರದ್ದುಗೊಳಿಸಬೇಕು’ ಎಂದೂ ಒಕ್ಕೂಟ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.