ADVERTISEMENT

ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಪರೀಕ್ಷೆ ಬಳಸುವಂತಿಲ್ಲ: ಸುರೇಶ್‌ಕುಮಾರ್‌

ಪರೀಕ್ಷೆ: ಎರಡು ದಿನದಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 22:12 IST
Last Updated 5 ಏಪ್ರಿಲ್ 2021, 22:12 IST
ಎಸ್. ಸುರೇಶ್‌ ಕುಮಾರ್‌
ಎಸ್. ಸುರೇಶ್‌ ಕುಮಾರ್‌    

ಬೆಂಗಳೂರು: ‘ರಾಜ್ಯದಲ್ಲಿ 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷ ಲಿಖಿತ ಪರೀಕ್ಷೆ ನಡೆಸಬೇಕೆ, ಬೇಡವೇ ಎಂಬುದರ ಬಗ್ಗೆ ಎರಡು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಹೇಳಿದರು.

ಈ ಕುರಿತು ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಖಾಸಗಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಪೋಷಕರ ಸಂಘಟನೆಗಳ ಮುಖಂಡರೊಂದಿಗೆ ಸೋಮವಾರ ಅವರು ಸಭೆ ನಡೆಸಿದರು.

‘ಯಾವುದೇ ಶಾಲೆಯು ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವುದಕ್ಕೆಂದೇ ಪರೀಕ್ಷೆಗಳನ್ನು ಬಳಸಿಕೊಳ್ಳುವಂತಿಲ್ಲ. ಆದರೆ ಈ ಸಾಲಿನಲ್ಲಿ 1ರಿಂದ 5 ಮತ್ತು 6ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳ ಕಲಿಕಾನುಭವ ಸಮಾನವಾಗಿಲ್ಲವಾದ್ದರಿಂದ ಸಿಸಿಇ ಅಡಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯನ್ನು ಅವಲೋಕಿಸಿ ದಾಖಲಿಸುವ ಜವಾಬ್ದಾರಿ ಹೊಂದಿದ್ದಾರೆ’ ಎಂದೂ ತಿಳಿಸಿದರು.

ADVERTISEMENT

‘ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭದಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಇನ್ನಷ್ಟು ವೇಗವರ್ಧಕಗೊಳಿಸಲು ಸಹ ಆಲೋಚಿಸಲಾಗುತ್ತಿದೆ’ ಎಂದು ಸುರೇಶ್ ಕುಮಾರ್ ವಿವರಿಸಿದರು.

ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ‘ಶಿಕ್ಷಣ ಹಕ್ಕು ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಕಲಿಕೆಯನ್ನು ಗುರುತಿಸಿ ಸುಧಾರಿಸಲು ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನಕ್ಕೆ ಅವಕಾಶವಿದೆ. ಬಹುತೇಕ ಶಾಲೆಗಳು ಈಗಾಗಲೇ ಮೌಲ್ಯಮಾಪನ ಪರೀಕ್ಷೆಗಳನ್ನು ನಡೆಸಿವೆ. ಈಗ ಮತ್ತೊಂದು ಪರೀಕ್ಷೆಯ ಅಗತ್ಯವೇ ಇಲ್ಲ’ ಎಂದು ಹೇಳಿದರು.

‘ಪರೀಕ್ಷೆ ನಡೆಸಲೇಬೇಕೆಂದಾದರೆ ನಿರಂತರ ಮೌಲ್ಯಮಾಪನದ ಅನ್ವಯ ಸಂಕಲನಾತ್ಮಕ ಪರೀಕ್ಷೆ ಮಾಡಬಹುದು. ಆದರೆ ಯಾವುದೇ ಮಕ್ಕಳನ್ನು ತಡೆಹಿಡಿಯುವುದು ಈ ಸಂಕಷ್ಟದ ಸಮಯದಲ್ಲಿ ಬೇಡ. ಜೊತೆಗೆ, ಪರೀಕ್ಷೆ ಹೆಸರಿನಲ್ಲಿ ಶುಲ್ಕಕ್ಕೆ ಒತ್ತಾಯಪೂರ್ವಕವಾಗಿ ಬೇಡಿಕೆ ಇಡುವುದು, ಫಲಿತಾಂಶ ಕೊಡುವುದಿಲ್ಲ ಎಂದು ಖಾಸಗಿ ಶಾಲೆಗಳು ಭಯ ಹುಟ್ಟಿಸಬಾರದು. ಇದು ಕಾನೂನಿಗೂ ವಿರುದ್ಧವಾಗುತ್ತದೆ’ ಎಂದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪರ ಮಾತನಾಡಿದ ಉಳ್ಳಾಲದ ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್. ಸುಪ್ರೀತ್, ‘ವಿದ್ಯಾರ್ಥಿಗಳು ಈಗಾಗಲೇ ಭೌತಿಕವಾಗಿ ಇಲ್ಲವೇ ಆನ್ ಲೈನ್ ಮೂಲಕ ಪಾಠಗಳನ್ನು ಆಲಿಸಿದ್ದಾರೆ. ಯಾವುದಾದರೂ ರೀತಿಯಲ್ಲಿ ಕಲಿಕೆಯ ಮೌಲ್ಯಾಂಕನ ನಡೆಸುವುದು ಸೂಕ್ತ’ ಎಂದರು.

‘1ರಿಂದ 5ನೇ ತರಗತಿ ಸಾಧ್ಯವಾಗದಿದ್ದರೂ, 6ರಿಂದ 9ನೇ ತರಗತಿಯವರಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು. ಕಳೆದ ಬಾರಿ ಪರೀಕ್ಷೆ ನಡೆದಿಲ್ಲ. ಈ ಬಾರಿಯೂ ಮೌಲ್ಯಮಾಪನ ಆಗದಿದ್ದರೆ ವಿದ್ಯಾರ್ಥಿಗಳು ಕಲಿಕೆಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುವ ಅಪಾಯ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.