ಸಚಿವ ಆರ್.ಬಿ. ತಿಮ್ಮಾಪುರ
ಬೆಂಗಳೂರು: ಅಬಕಾರಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಈಡಿಗ/ಬಿಲ್ಲವ ಸಮುದಾಯದವರಿಗೆ ವ್ಯಾವಹಾರಿಕ ಬೆಂಬಲ, ಲಾಭಾಂಶ ನೀಡಲು ಸಮಿತಿ ರಚಿಸಲಾಗುವುದು. ತೆಲಂಗಾಣಕ್ಕೆ ಕಳುಹಿಸಿ, ವರದಿ ಪಡೆಯಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ತೆಲಂಗಾಣದಲ್ಲಿ ಅಬಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಗೌಡ ಸಮುದಾಯಕ್ಕೆ ಅಲ್ಲಿನ ಸರ್ಕಾರ ವ್ಯಾವಹಾರಿಕ ಬೆಂಬಲದ ಜತೆಗೆ, ಲಾಭಾಂಶವನ್ನೂ ನೀಡುತ್ತಿರುವ ಬಗ್ಗೆ ಹರಿಪ್ರಸಾದ್ ಗಮನ ಸೆಳೆದಿದ್ದಾರೆ. ರಾಜ್ಯದಲ್ಲೂ ಈ ಸೌಲಭ್ಯವನ್ನು ಮೂಲ ಕಸುಬುದಾರರಾದ ಈಡಿಗ/ಬಿಲ್ಲವರಿಗೆ ನೀಡಲು ಸರ್ಕಾರ ಸಿದ್ಧವಿದೆ. ಸಮಿತಿ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಅಬಕಾರಿ ಮೂಲದಿಂದ ದೊರೆಯುತ್ತಿದ್ದ ಲಾಭದಲ್ಲಿ ಮೊದಲು ಶೇ 20ರಷ್ಟು ಮೂಲಕಸುಬುದಾರ ಕುಟುಂಬಗಳಿಗೆ ನೀಡಲಾಗುತ್ತಿತ್ತು. ಈಗ ಅದನ್ನು ಶೇ 10ಕ್ಕೆ ಇಳಿಸಲಾಗಿದೆ. ಸನ್ನದು ಶುಲ್ಕವನ್ನೂ ವಿಧಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇಂತಹ ಕಿರುಕುಳಗಳಿಂದಾಗಿ ವೃತ್ತಿ ಘೋಷಣೆ ಮಾಡಿಕೊಂಡಿದ್ದ ಶೇ 25ರಷ್ಟು ಮಂದಿ ಮೂಲ ವೃತ್ತಿ ತೊರೆದಿದ್ದಾರೆ. ಸರ್ಕಾರ ಅವರ ನೆರವಿಗೆ ನಿಲ್ಲಬೇಕು. ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನೀಡಿರುವ ಸಲಹೆಗಳನ್ನು ಪರಿಗಣಿಸಬೇಕು’ ಎಂದು ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.