ADVERTISEMENT

ಬೆಳೆ ಸಾಲ ಮನ್ನಾದ ಲಾಭ; ರೈತರ ದಾಖಲೆ ಬೋಗಸ್‌?

ಸಾಲ ಮನ್ನಾ ಆಧಾರ್ ಸಂಖ್ಯೆ ಹೊಂದಿಕೆಯಾಗದೇ ಇದ್ದರೆ ಸೌಲಭ್ಯ ಇಲ್ಲ

ಮಂಜುನಾಥ್ ಹೆಬ್ಬಾರ್‌
Published 22 ಫೆಬ್ರುವರಿ 2019, 19:35 IST
Last Updated 22 ಫೆಬ್ರುವರಿ 2019, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲ ಮನ್ನಾದ ಲಾಭ ಪಡೆಯಲು 1.80 ಲಕ್ಷ ರೈತರು ಬೋಗಸ್‌ ದಾಖಲೆಗಳನ್ನು ನೀಡಿರುವ ಸಂಶಯ ಮೂಡಿದ್ದು, ಈ ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ 16.72 ಲಕ್ಷ ರೈತರ ₹46 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೊದಲ ಕಂತಿನಲ್ಲಿ ₹6,500 ಕೋಟಿ ತೆಗೆದಿರಿಸಿದ್ದರು. ಈ ಯೋಜನೆಯ ಲಾಭ ನೈಜ ಫಲಾನುಭವಿಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಇದರ ನೆರವಿನಿಂದ ಕೆಲವರು ನೀಡಿರುವ ದಾಖಲೆಗಳು ಬೋಗಸ್‌ ಎಂಬ ಶಂಕೆ ಇದ್ದು, ಈ ಬಗ್ಗೆ ಕಂದಾಯ ಇಲಾಖೆ ಮರು ಪರಿಶೀಲನೆ ಕೈಗೊಂಡಿದೆ.

ಸಾಲಗಾರ ರೈತರು ಪಡಿತರ ಚೀಟಿ, ಆಧಾರ್ ಸಂಖ್ಯೆ ಹಾಗೂ ಭೂ ದಾಖಲೆಗಳನ್ನು ಸಂಬಂಧಿಸಿದ ಬ್ಯಾಂಕ್‌ಗೆ ನೀಡಿದ್ದಾರೆ. ಈ ದಾಖಲೆಗಳನ್ನು ಬ್ಯಾಂಕ್‌ನವರು ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಿದ್ದಾರೆ. ಮೂರು ದಾಖಲೆಗಳು ಹೊಂದಾಣಿಕೆಯಾದ ರೈತರು ಮಾತ್ರವೇ ಸಾಲ ಮನ್ನಾಕ್ಕೆ ಅರ್ಹರು. ದಾಖಲೆಗಳಲ್ಲಿ ದೋಷ ಇದ್ದರೆ ಅಂತಹ ಪ್ರಕರಣಗಳನ್ನು ತಹಶೀಲ್ದಾರ್‌ ನೇತೃತ್ವದ ತಾಲ್ಲೂಕು ಮಟ್ಟದ ಸಮಿತಿಗೆ ಶಿಫಾರಸು ಮಾಡಲಾಗುತ್ತಿದೆ. ಈ ಸಮಿತಿ ಮತ್ತೆ ದಾಖಲೆಗಳ ಪರಿಶೀಲನೆ ನಡೆಸಿ ಒಪ್ಪಿಗೆ ನೀಡುತ್ತಿದೆ.

ADVERTISEMENT

‘1.80 ಲಕ್ಷ ಖಾತೆಗಳ ಪೈಕಿ 1.60 ಲಕ್ಷ ಖಾತೆಗಳ ಪಡಿತರ ಚೀಟಿಗಳು ಅಸ್ತಿತ್ವದಲ್ಲೇ ಇಲ್ಲ. ಬೋಗಸ್‌ ಎಂದು ಶಂಕಿಸಲಾದ ಉಳಿದ 20 ಸಾವಿರ ಪ್ರಕರಣಗಳು ಆಧಾರ್‌ ಸಂಖ್ಯೆ ಹಾಗೂ ಭೂದಾಖಲೆಗಳಿಗೆ ಸಂಬಂಧಿಸಿದ್ದಾಗಿವೆ. ರಾಜ್ಯ ಸರ್ಕಾರ ₹2 ಲಕ್ಷದ ವರೆಗಿನ ಮೊತ್ತ ಸಾಲ ಮನ್ನಾ ಮಾಡುತ್ತಿದ್ದು, 1.80 ಲಕ್ಷ ಖಾತೆಗಳ ಸಾಲ ಮನ್ನಾದ ಮೊತ್ತ ₹2 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆಹಾರ ಮತ್ತು ನಾಗರಿಕ ಪೂರೈಕೆಯು ಅಸ್ತಿತ್ವದಲ್ಲಿರುವ ಎಲ್ಲ ಪಡಿತರ ಚೀಟಿಗಳಿಗೆ ಈಗಾಗಲೇ ಆಧಾರ್‌ ಜೋಡಣೆ ಮಾಡಿದೆ. ಇದನ್ನು ಬಳಸಿಕೊಂಡು ಪಡಿತರ ಚೀಟಿ ನಕಲಿಯೋ ಅಸಲಿಯೋ ಎಂಬುದನ್ನು ಪರಿಶೀಲಿಸುವಂತೆ ಆಹಾರ ಇಲಾಖೆಗೆ ಸೂಚಿಸಲಾಗಿದೆ. ಜತೆಗೆ, ಬೋಗಸ್‌ ದಾಖಲೆಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಬ್ಯಾಂಕ್‌ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ’ ಎಂದೂ ಅವರು ಹೇಳಿದರು.

‘ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಕ್ರಿಯೆ ವೇಳೆ ನಾಲ್ಕು ಲಕ್ಷ ರೈತರು ಪಡಿತರ ಚೀಟಿಗಳನ್ನು ಒದಗಿಸಿರಲಿಲ್ಲ. ಆಧಾರ್‌ ನೆರವಿನಿಂದ 2 ಲಕ್ಷ ರೈತರ ಪಡಿತರ ಚೀಟಿಗಳ ಮಾಹಿತಿ ಸಂಗ್ರಹಿಸಿದ್ದೇವೆ’ ಎಂದು ಅವರು ವಿವರಿಸಿದರು.

ವಿಳಾಸದಲ್ಲಿ ಇಲ್ಲ: ಸುಮಾರು 1 ಲಕ್ಷ ರೈತರು ಮೂಲ ವಿಳಾಸದಲ್ಲಿ ಇಲ್ಲದಿರುವುದು ಸಹ ಬೆಳಕಿಗೆ ಬಂದಿದೆ. 10 ಸಾವಿರ ಗ್ರಾಮ ಲೆಕ್ಕಿಗರು ಈ ರೈತರ ವಿಳಾಸಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

‘2009ರಿಂದ 2017ರ ನಡುವೆ ಪಡೆದ ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು, ಈ ರೈತರು ಬೇರೆ ಕಡೆಗೆ ವಲಸೆ ಹೋಗಿರಬಹುದು. ಇನ್ನಷ್ಟು ಸಮಯ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಮುಂದುವರಿಯಲಿದ್ದು, ರೈತರು ದಾಖಲೆಗಳನ್ನು ಸಲ್ಲಿಸಲು ಮುಕ್ತ ಅವಕಾಶ ನೀಡಲಾಗುತ್ತದೆ’ ಎಂದು ಅವರು ತಿಳಿಸಿದರು.

₹1,300 ಕೋಟಿ ಶೀಘ್ರ ಬಿಡುಗಡೆ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾಕ್ಕೆ ₹1,300 ಕೋಟಿ ಮೊತ್ತವನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೊತ್ತ ಬಳಸಿ 5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗುತ್ತದೆ.

ಡಿಸೆಂಬರ್‌ 12ರಿಂದ ಜನವರಿ 31ರ ವರೆಗೆ ಐದು ಕಂತುಗಳಲ್ಲಿ ₹843 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದರ ಲಾಭವನ್ನು 1,88,420 ಲಕ್ಷ ರೈತರು ಪಡೆದಿದ್ದರು.

**
ಅಂಕಿ ಅಂಶಗಳು

* 16,72,242 - ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲದ ಖಾತೆ

* 16,36,470 - ದಾಖಲೆ ಸಲ್ಲಿಸಿರುವವರು

* 9,47,666 - ದಾಖಲೆಗಳ ಪರಿಶೀಲನೆ ಪೂರ್ಣ

* 5.01 ಲಕ್ಷ - ತಾಲ್ಲೂಕು ಮಟ್ಟದ ಸಮಿತಿಗೆ ಶಿಫಾರಸು

* 3.54 ಲಕ್ಷ - ಸಮಿತಿಯಿಂದ ಅನುಮೋದನೆ

* 11,014 - ಸಮಿತಿ ತಿರಸ್ಕಾರ

* 1.35 ಲಕ್ಷ - ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು

**

ಸಾಲ ಮನ್ನಾ ತಂತ್ರಾಂಶ ಪಾರದರ್ಶಕವಾಗಿದ್ದು, ಎಲ್ಲ ಮಾಹಿತಿಗಳು ಲಭ್ಯ ಇವೆ. ಶೇ 98ರಷ್ಟು ರೈತರು ದಾಖಲೆಗಳನ್ನು ಸಲ್ಲಿಸಿದ್ದಾರೆ. ಅನುಮಾನವಿದ್ದರೆ ಪರಿಶೀಲಿಸಬಹುದು
ಮುನಿಷ್‌ ಮೌದ್ಗಿಲ್‌, ಸಾಲ ಮನ್ನಾ ಯೋಜನೆಯ ನೋಡಲ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.