ADVERTISEMENT

ತಿದ್ದುಪಡಿ ಕಾಯ್ದೆಗಳ ಪ್ರತಿ ಸುಟ್ಟು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 5:30 IST
Last Updated 15 ಡಿಸೆಂಬರ್ 2020, 5:30 IST
ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ವಿವಿಧ ಕಾಯ್ದೆಗಳ ಪ್ರತಿಗಳನ್ನು ಕಲಬುರ್ಗಿಯಲ್ಲಿ ಸೋಮವಾರ ಪ್ರತಿಭಟನಾಕಾರರು ಸುಟ್ಟುಹಾಕಿದರು
ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ವಿವಿಧ ಕಾಯ್ದೆಗಳ ಪ್ರತಿಗಳನ್ನು ಕಲಬುರ್ಗಿಯಲ್ಲಿ ಸೋಮವಾರ ಪ್ರತಿಭಟನಾಕಾರರು ಸುಟ್ಟುಹಾಕಿದರು   

ಕಲಬುರ್ಗಿ: ಕೇಂದ್ರ ಸರ್ಕಾರ ರೈತ ವಿರೋಧ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ, ದೆಹಲಿಯಲ್ಲಿ ರೈತರು ಕೈಗೊಂಡ ಪ್ರತಿಭಟನೆ ಬೆಂಬಲಿಸಿ, ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ, ರೈತರು– ಕಾರ್ಮಿಕರು– ದಲಿತರ ಐಕ್ಯ ಹೋರಾಟ ಸಮಿತಿಗಳ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮುಂದಾಳತ್ವ ವಹಿಸಿದ್ದ ಕಾಂಗ್ರೆಸ್‌ ಮುಖಂಡ ಬಿ.ಆರ್. ಪಾಟೀಲ ಮಾತನಾಡಿ, ‘ರೈತರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಬಂಧಿಸಿದ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಈ ಮೂಲಕ ರೈತ ಸಮುದಾಯವನ್ನು ಕಾರ್ಪೊರೇಟ್‌ ಕುಳಗಳ ಅಡಿಯಾಳು ಮಾಡಲು ಹೊರಟಿದೆ. ದೇಶದ ಎಲ್ಲ ಸಂಪತ್ತನ್ನು ಅಂದಾನಿ, ಅದಾನಿ ಹಾಗೂ ಇತರ ಕಾರ್ಪೊರೇಟ್‌ ಸಂಸ್ಥೆಗಳಿಗೆ ಹಂಚುತ್ತಿದೆ. ಇದು ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಪಿಎಂಸಿ ತಿದ್ದುಪಡಿ ಕಾಯ್ದೆ, ಬೆಲೆ ಭರವಸೆ (ಸಶಕ್ತೀಕರಣ ಮತ್ತು ಸುರಕ್ಷೆ), ಕೃಷಿ ಸೇವೆಗಳ ಕಾಯ್ದೆ (ಗುತ್ತಿಗೆ ಕೃಷಿ ಕಾಯ್ದೆ 2020), ಅಗತ್ಯ ವಸ್ತುಗಳ ತಿದ್ದುಪಡಿ, ವಿದ್ಯುತ್ ಕಾಯ್ದೆಗಳ ತಿದ್ದುಪಡಿ ಮಸೂದೆಗಳು ಜನ ವಿರೋಧಿಯಾಗಿವೆ. ಎಪಿಎಂಸಿ ಹಾಗೂ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಗಳು ಕಾರ್ಪೊರೇಟ್ ಮನೆತನಗಳನ್ನು ಜಾರಿಗೊಳಿಸಲಾಗುತ್ತಿದೆ. ಇದನ್ನು ವಿರೋಧಿಸಿ ದೇಶದಾದ್ಯಂತ ರೈತ ಸಂಘಟನೆಗಳು ನಡೆಸುತ್ತಿರುವ ಬೃಹತ್ ಆಂದೋಲನಕ್ಕೆ ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಮುಂದಾಗಿದೆ. ರೈತರಿಗೆ ಸಂಪೂರ್ಣ ಬೆಂಬಲ ನೀಡುವ ಜತೆಗೆ, ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದರು.‌

ADVERTISEMENT

ವಿವಿಧ ರೈತ ಪರ ಸಂಘಟನೆಗಳ ಮುಖಂಡರಾದ ದಯಾನಂದ ಪಾಟೀಲ, ಶರಣಬಸ್ಸಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ಮಹೇಶ್ ಎಸ್.ಬಿ., ಎ.ಬಿ. ಹೊಸಮನಿ, ಜಗದೇವಿ ಆರ್.ಹೆಗಡೆ, ಶರಣಪ್ಪ ಜಂಬಳ್ಳಿ, ವಿ.ಜಿ. ದೇಸಾಯಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.