ADVERTISEMENT

'ಫೆಂಜಲ್‌' ಪರಿಣಾಮ ರಾಜ್ಯದ ವಿವಿಧೆಡೆ ಅಕಾಲಿಕ ಮಳೆ : ಭತ್ತ, ಅಡಿಕೆಗೆ ಹಾನಿ

ಡಿಸೆಂಬರ್‌ 6ರವರೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 23:30 IST
Last Updated 2 ಡಿಸೆಂಬರ್ 2024, 23:30 IST
<div class="paragraphs"><p>‘ಪೆಂಜಲ್‌’ ಚಂಡಮಾರುತದ ಪರಿಣಾಮ ಮಳೆಯಿಂದ ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ನೆಲಕ್ಕೊರಗಿದ ಭತ್ತದ ಬೆಳೆ</p></div>

‘ಪೆಂಜಲ್‌’ ಚಂಡಮಾರುತದ ಪರಿಣಾಮ ಮಳೆಯಿಂದ ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ನೆಲಕ್ಕೊರಗಿದ ಭತ್ತದ ಬೆಳೆ

   

ಮಂಗಳೂರು/ಮೈಸೂರು: ಫೆಂಜಲ್‌ ಚಂಡಮಾರುತದ ಪರಿಣಾಮ ಮಂಗಳೂರು, ಉಡುಪಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸೋಮವಾರ ಮಳೆಯಾಗಿದೆ. ಮಂಗಳೂರು ನಗರ ಮತ್ತು ಸುತ್ತಮುತ್ತ ಸಂಜೆ ಭಾರಿ ಮಳೆ ಸುರಿಯಿತು. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಿದೆ.

ಬೋಳಿಯಾರುನಲ್ಲಿ 13, ಬಾಳೇಪುಣಿಯಲ್ಲಿ 12 ಸೆಂ.ಮೀ. ಮಳೆ ದಾಖಲಾಗಿದೆ. ಮಂಗಳೂರು ನಗರ
ದಲ್ಲಿ ಮಧ್ಯಾಹ್ನ 3.30ರ ಸುಮಾರು ಆರಂಭವಾದ ಮಳೆ, ನಿರಂತರವಾಗಿ ಮೂರು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಅವರು ಸಭೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ನೀರು ಸಭಾಂಗಣಕ್ಕೆ ನುಗ್ಗಿದ್ದರಿಂದ ಸಭೆಗೆ ಅಡಚಣೆಯಾಯಿತು. ಕೊಟ್ಟಾರ ಪ್ರದೇಶದಲ್ಲಿ ಭಾರಿ ಮಳೆ ನೀರು ರಸ್ತೆ ಮೇಲೆ ಹರಿದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದೇ 6ರ ವರೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ದವಾಗಿರಲಿದ್ದು, ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

ADVERTISEMENT

ಹುಬ್ಬಳ್ಳಿ ವರದಿ:  ಹುಬ್ಬಳ್ಳಿ, ಉತ್ತರ ಕನ್ನಡ, ಹಾವೇರಿ, ವಿಜಯಪುರ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕೆಲವೆಡೆ ಸೋಮವಾರ ಮಳೆಯಾಗಿದೆ.

ಕಾರವಾರ ಸೇರಿ ಕರಾವಳಿ ಭಾಗದಲ್ಲಿ ಕೆಲ ನಿಮಿಷ ಜಿಟಿಜಿಟಿ ಮಳೆ ಸುರಿದರೆ, ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ ಮತ್ತು ಮುಂಡಗೋಡ ಭಾಗದಲ್ಲಿ ಕೆಲ ಗಂಟೆ ಬಿರುಸಿನ ಮಳೆ ಸುರಿದಿದೆ. ಅಕಾ
ಲಿಕ ಮಳೆಯಿಂದ ಕಟಾವು ಮಾಡಲಾದ ಭತ್ತ, ಒಣಗಲು ಹಾಕಿದ್ದ ಅಡಿಕೆಗೆ ಹಾನಿಯಾಗಿದೆ.

ಹುಬ್ಬಳ್ಳಿ ನಗರ, ಧಾರವಾಡ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸ
ಪೇಟೆ, ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿ ಜಿಟಿ ಜಿಟಿ ಮಳೆ ಬಿದ್ದಿದೆ. 

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಒಂದು ತಾಸು ರಭಸದ ಮಳೆ ಸುರಿಯಿತು. ಹಿಂಗಾರು ಹಂಗಾಮಿನ ಜೋಳ, ಸೂರ್ಯಕಾಂತಿ, ಶೇಂಗಾ, ಕುಸಬಿ, ಹುರುಳಿ ಬೆಳೆಗೆ ಅನುಕೂಲವಾಗಿದೆ. ಆದರೆ, ಕಡಲೆ ಬೆಳೆಗೆ ಮಳೆಯಿಂದ ತೊಂದರೆಯಾಗಿದೆ ಎಂದು ರೈತರು ತಿಳಿಸಿದರು.

‘ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಆರ್‌ಎನ್‌ಆರ್‌ ತಳಿ ಭತ್ತ ಬೆಳೆಯಲಾಗುತ್ತದೆ. ಬೆಳೆ ಸದ್ಯ ಕಟಾವು ಹಂತಕ್ಕೆ ಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಮಳೆ ಬರಬಾರದು. ತೇವಾಂಶ ಹೆಚ್ಚಾಗಿ, ಬೆಳೆ ನೆಲಕ್ಕೆ ಒರಗುತ್ತದೆ. ಮೊಳಕೆ ಒಡೆಯುತ್ತದೆ. ಇದು ಬೆಳೆ ಹಾನಿಗೆ ಕಾರಣವಾಗುತ್ತದೆ’ ಎಂದು ಕೃಷಿ ಇಲಾಖೆ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕ ಸೋಮಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಲ್ಯಾಣ’ದ ಕೆಲವೆಡೆ ತುಂತುರು ಮಳೆಕಲಬುರಗಿ ವರದಿ: ಕಲ್ಯಾಣಕರ್ನಾಟಕದ ರಾಯಚೂರು, ಕೊಪ್ಪಳ, ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ದಿನವಿಡೀ ಮೋಡಕವಿದ ವಾತಾವರಣವಿದ್ದು, ಸಂಜೆ ಕೆಲ ಕಾಲ ತುಂತುರು ಮಳೆಯಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು, ಕವಿತಾಳದಲ್ಲಿ ಸಾಧಾರಣ ಮಳೆ ಸುರಿದಿದೆ. ಲಿಂಗಸುಗೂರಿನಲ್ಲಿ ತುಂತುರು‌ ಮಳೆಯಾಗಿದೆ.

ಕೊಪ್ಪಳ, ಮುನಿರಾಬಾದ್, ಕಾರಟಗಿಯಲ್ಲಿ ದಿನವಿಡೀ ಮೋಡಕವಿದ ವಾತಾವರಣವಿತ್ತು. ಕೊಪ್ಪಳದಲ್ಲಿ ಮಧ್ಯಾಹ್ನ ಕೆಲಹೊತ್ತು, ಬೀದರ್‌ನಲ್ಲಿ ಸಂಜೆ ಜಿಟಿಜಿಟಿಯಾಗಿ ಮಳೆ ಸುರಿದಿದೆ. ಕಲಬುರಗಿ ನಗರದಲ್ಲೂ ಸಂಜೆ ಕೆಲ ಕಾಲ ತುಂತುರು ಮಳೆಯಾಗಿದೆ.

ರಾಗಿ, ಅವರೆ, ಮೆಕ್ಕೆಜೋಳ ಬೆಳೆಗೆ ಹಾನಿ

ಮೈಸೂರು: ಕಾವೇರಿ ಕಣಿವೆಯ ಐದು ಜಿಲ್ಲೆಗಳಲ್ಲೂ ಸೋಮವಾರವೂ ಜೋರು ಮಳೆ ಮುಂದುವರಿದಿದ್ದು, ಜನಜೀವನಕ್ಕೆ ಅಡ್ಡಿಯಾಯಿತು.

ಭಾನುವಾರ ರಾತ್ರಿಯಿಂದಲೂ ಜಿಟಿಜಿಟಿ ಮಳೆಯಾಗುತ್ತಿದೆ. ಮಳೆಯಿಂದ ಕೃಷಿ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಈ ಭಾಗದಲ್ಲಿ ಭತ್ತದ ಕೊಯ್ಲಿಗೆ ರೈತರು ಸಿದ್ಧತೆ ನಡೆಸಿದ್ದು, ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ. ಭತ್ತ, ರಾಗಿ, ಅವರೆ ಹಾಗೂ ಮೆಕ್ಕೆಜೋಳದ ಬೆಳೆಗೂ ಹಾನಿಯಾಗಿದೆ. ಕೊಯ್ಲಿಗೆ ಬಂದ ಭತ್ತದ ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದು, ಬೆಳೆ ಹಾನಿಯ ಭೀತಿ ಎದುರಾಗಿದೆ.

ದಿನವಿಡೀ ಚಳಿ ಹಾಗೂ ಶೀತಗಾಳಿಯ ವಾತಾವರಣ ಇತ್ತು. ಸೋಮವಾರ ರಾತ್ರಿಯೂ ಮಳೆ ಮುಂದುವರಿದಿತ್ತು. 

ಎಡೆಬಿಡದೆ ಸುರಿದ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ಹಾಗೂ ಕಾಡಂಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡಿದ್ದವು. ಬೆಟ್ಟದ ತಂಬಡಿಗೇರಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ ಮರಗಳು ಹಾಗೂ ಬಿದಿರು ರಸ್ತೆಗೆ ಬಿದ್ದಿದ್ದರಿಂದಾಗಿ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು, ರೆಡ್ ಅಲರ್ಟ್ ಘೋಷಿಸಿದೆ. ಭತ್ತ ಹಾಗೂ ಅರೇಬಿಕಾ ಕಾಫಿ ಕೊಯ್ಲಿಗೆ ಬಂದಿದ್ದು, ರೈತರು ಮತ್ತು ಬೆಳೆಗಾರರಲ್ಲಿ ಆತಂಕ ಮೂಡಿದೆ. ಶನಿವಾರಸಂತೆ ಭಾಗದ ಅಲ್ಲಲ್ಲಿ ಅರೇಬಿಕಾ ಕಾಫಿ ಕೊಯ್ಲು ಮಾಡಲಾಗುತ್ತಿದೆ. ಜಿಟಿ ಜಿಟಿ ಮಳೆಯ ಕಾಫಿ ಹಣ್ಣುಗಳನ್ನು ಒಣಗಿಸಲು ಅಡ್ಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.