ADVERTISEMENT

ತಹಶೀಲ್ದಾರ್‌ ವರ್ಗಾವಣೆ: ವಿಧಾನಸಭೆ ಮೊಗಸಾಲೆಯಲ್ಲೇ ಅಶೋಕ-ಅಶ್ವತ್ಥನಾರಾಯಣ ಕಿತ್ತಾಟ

ಕೈ ಮಿಲಾಯಿಸುವ ಹಂತ ತಲುಪಿದ್ದ ಸಚಿವರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 3:03 IST
Last Updated 19 ಮಾರ್ಚ್ 2022, 3:03 IST
ಭಾವು ಪತ್ತಾರ್‌
ಭಾವು ಪತ್ತಾರ್‌   

ಬೆಂಗಳೂರು: ಮಾಗಡಿ ತಾಲ್ಲೂಕಿನ ತಹಶೀಲ್ದಾರ್‌ ವರ್ಗಾವಣೆ ವಿಚಾರದಲ್ಲಿ ಕಂದಾಯ ಸಚಿವ ಆರ್‌.ಅಶೋಕ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ನಡುವೆ ವಿಧಾನಸಭೆ ಮೊಗಸಾಲೆಯಲ್ಲೇ ಗುರುವಾರ ಕಿತ್ತಾಟ ನಡೆದಿದೆ. ಇಬ್ಬರೂ ಕೈ–ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಶುಕ್ರವಾರ ಬಹಿರಂಗಗೊಂಡಿದೆ.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅಶ್ವತ್ಥನಾರಾಯಣ, ಮಾಗಡಿ ತಹಶೀಲ್ದಾರ್‌ ಶ್ರೀನಿವಾಸ್‌ ಅವರನ್ನು ವರ್ಗಾವಣೆ ಮಾಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆದಿದ್ದರು. ಆದರೆ, ಕಂದಾಯ ಸಚಿವರು ವರ್ಗಾವಣೆ ಆದೇಶ ಹೊರಡಿಸಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಗುರುವಾರ ಮಧ್ಯಾಹ್ನ ಜಗಳ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶ್ರೀನಿವಾಸ್‌ ಬದಲಿಗೆ ಬೇರೊಬ್ಬ ಅಧಿಕಾರಿಯನ್ನು ನೇಮಿಸುವಂತೆ ಅಶ್ವತ್ಥನಾರಾಯಣ ಮೂರು ಬಾರಿ ಪತ್ರ ಬರೆದಿದ್ದರು. ಅದನ್ನು ಅಶೋಕ ಮಾನ್ಯ ಮಾಡಿರಲಿಲ್ಲ. ಶ್ರೀನಿವಾಸ್‌ಗೆ ಪ್ರಭಾವಿ ಮಠಾಧೀಶರೊಬ್ಬರ ಬೆಂಬಲ ಇದ್ದು, ವರ್ಗಾವಣೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವರು ಹೇಳಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ADVERTISEMENT

‘ಗುರುವಾರ ಮಧ್ಯಾಹ್ನ ವಿಧಾನಸಭೆ ಕಲಾಪ ನಡೆಯುತ್ತಿದ್ದ ಅವಧಿಯಲ್ಲೇ ಇಬ್ಬರೂ ಸಚಿವರು ಆಡಳಿತ ಪಕ್ಷದ ಮೊಗಸಾಲೆಯ ಸಚಿವರ ಕೊಠಡಿಯಲ್ಲಿ ಮುಖಾಮುಖಿ ಆಗಿದ್ದಾರೆ. ಆಗ, ಅಶ್ವತ್ಥನಾರಾಯಣ ತಹಶೀಲ್ದಾರ್‌ ವರ್ಗಾವಣೆ ವಿಷಯ ಪ್ರಸ್ತಾಪಿಸಿದ್ದಾರೆ. ‘ನಾನು ಒಬ್ಬ ಜಿಲ್ಲಾ ಉಸ್ತುವಾರಿ ಸಚಿವ. ನನಗೆ ಅಷ್ಟೂ ಬೆಲೆ ಇಲ್ಲವೆ? ನಾನು ಹಲವು ಬಾರಿ ಹೇಳಿದರೂ ವರ್ಗಾವಣೆ ಮಾಡುವುದಿಲ್ಲ ಎಂದರೆ ಹೇಗೆ’ ಎಂದು ಏರಿದ ದನಿಯಲ್ಲಿ ಕಂದಾಯ ಸಚಿವರನ್ನು ಪ್ರಶ್ನಿಸಿದರು’ ಎಂದು ಪ್ರತ್ಯಕ್ಷದರ್ಶಿ ಮೂಲಗಳು ತಿಳಿಸಿವೆ.

ಅದಕ್ಕೆ ಸಿಟ್ಟಾದ ಅಶೋಕ, ‘ನನ್ನ ಇಲಾಖೆಯಲ್ಲಿ ಯಾರನ್ನು? ಎಲ್ಲಿಗೆ ವರ್ಗಾವಣೆ ಮಾಡಬೇಕು? ಎಂಬುದು ನನಗೆ ಗೊತ್ತಿದೆ. ನಿಮ್ಮಿಂದ ಅದನ್ನು ಕಲಿಯಬೇಕಿಲ್ಲ. ಪಕ್ಷದಲ್ಲಿ ನಾನು ನಿಮಗಿಂತಲೂ ಹಿರಿಯ. ನನಗೆ ನಿಮ್ಮ ಉಪದೇಶ ಬೇಡ’ ಎಂದು ಗದರಿದರು.

ನಂತರ ಇಬ್ಬರ ನಡುವೆಯೂ ಏಕವಚನದಲ್ಲೇ ವಾಕ್ಸಮರ ನಡೆದಿದೆ. ‘ನೀನು ಏನೇನು ಮಾಡುತ್ತಿದ್ದೀಯ ಎಂಬುದು ನನಗೂ ಗೊತ್ತಿದೆ’ ಎಂದು ಇಬ್ಬರೂ ಜಗಳವಾಡಿಕೊಂಡರು. ಇಬ್ಬರ ಇಲಾಖೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನೂ ಪ್ರಸ್ತಾಪಿಸಿ ಪರಸ್ಪರ ನಿಂದಿಸಿಕೊಂಡರು.

ಮಾತು ತಾರಕಕ್ಕೇರಿದಾಗ ಒಂದು ಹಂತದಲ್ಲಿ ಅಶ್ವತ್ಥನಾರಾಯಣ ಸಿಟ್ಟಿಗೆದ್ದು ಅಶೋಕ ಅವರ ಮೇಲೆರಗಿ ಹೋದರು. ಅವರೂ ಸಿಟ್ಟಿನಿಂದಲೇ ಇವರತ್ತ ಧಾವಿಸಿದರು. ಸ್ಥಳದಲ್ಲಿದ್ದ ಕೆಲವು ಸಚಿವರು ಮತ್ತು ಶಾಸಕರು ಇಬ್ಬರನ್ನೂ ತಡೆದು, ಸಮಾಧಾನಪಡಿಸಿದರು ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಘಟನೆಯನ್ನು ವಿವರಿಸಿದರು.

‘ಜಗಳವೇನೂ ನಡೆದಿಲ್ಲ’

‘ತಹಶೀಲ್ದಾರ್‌ ವರ್ಗಾವಣೆ ವಿಚಾರದಲ್ಲಿ ನಾನು ಕೇಳಿದ್ದು ನಿಜ. ವರ್ಗಾವಣೆ ಮಾಡದೇ ಇರುವುದಕ್ಕೆ ಅವರಿಗೂ ತಾಂತ್ರಿಕ ಕಾರಣಗಳು ಇರಬಹುದು. ಈ ವಿಚಾರದಲ್ಲಿ ಜಗಳವೇನೂ ಆಗಿಲ್ಲ. ಇಬ್ಬರೂ ಸಹೋದರರ ರೀತಿಯಲ್ಲೇ ಇದ್ದೇವೆ’ ಎಂದು ಘಟನೆ ಕುರಿತು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಸಚಿವ ಆರ್‌. ಅಶೋಕ ಅವರು ಪ್ರತಿಕ್ರಿಯೆ ಪಡೆಯಲು ಲಭ್ಯವಾಗಲಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.