ADVERTISEMENT

ಸ್ತ್ರೀಶಕ್ತಿಗೆ ನೆರವು ಯೋಜನೆ: ಅ.2ಕ್ಕೆ ಚಾಲನೆ

ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 15:34 IST
Last Updated 22 ಜೂನ್ 2022, 15:34 IST
ಬೆಂಗಳೂರಿನಲ್ಲಿ ಬುಧವಾರ ನಡೆದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶದಲ್ಲಿ ಮಾಗಡಿಯ ಬುಡಕಟ್ಟು ಮಹಿಳೆಯರು ತಾವು ತಯಾರಿಸಿದ ಬಿದಿರಿನ ಬುಟ್ಟಿಗಳನ್ನು ಪ್ರದರ್ಶಿಸಿದರು  – ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಬುಧವಾರ ನಡೆದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶದಲ್ಲಿ ಮಾಗಡಿಯ ಬುಡಕಟ್ಟು ಮಹಿಳೆಯರು ತಾವು ತಯಾರಿಸಿದ ಬಿದಿರಿನ ಬುಟ್ಟಿಗಳನ್ನು ಪ್ರದರ್ಶಿಸಿದರು  – ಪ್ರಜಾವಾಣಿ ಚಿತ್ರ   

ಬೆಂಗಳೂರು: 'ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗೆ ಅಕ್ಟೋಬರ್ 2 ರಂದು ಚಾಲನೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶದಲ್ಲಿ ಈ ವಿಷಯ ತಿಳಿಸಿದರು.

‘ಸದ್ಯ, ಪ್ರತಿಯೊಂದು ಸ್ತ್ರೀಶಕ್ತಿ ಸಂಘಕ್ಕೆ ₹1.5 ಲಕ್ಷ ಆರ್ಥಿಕ ನೆರವು ಹಾಗೂ 25ರಿಂದ 30 ಪ್ರಾಜೆಕ್ಟ್‌ಗಳನ್ನು ನೀಡಲಾಗುತ್ತಿದೆ. ಆರ್ಥಿಕವಾಗಿ ಈ ಸಂಘಗಳನ್ನು ಬಲಪಡಿಸಲು ಆ್ಯಂಕರ್‌ ಬ್ಯಾಂಕ್‌ ಸಹ ಸ್ಥಾಪಿಸಲಾಗುತ್ತಿದೆ. ಅಮೆಜಾನ್‌ನಂತಹ ಆನ್‍ಲೈನ್ ವೇದಿಕೆಗಳಲ್ಲಿ ಸ್ತ್ರೀಶಕ್ತಿ ಸಂಘಗಳು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

’ಸ್ತ್ರೀಶಕ್ತಿ ಸಂಘಗಳ ವಹಿವಾಟು ಈಗ ಹೆಚ್ಚಾಗಿದೆ. ಪ್ರತಿ ತಿಂಗಳು ₹50 ಸಾವಿರ ವಹಿವಾಟು ಮಾಡುತ್ತಿದ್ದ ಸಂಘಗಳು ಈಗ 50 ಲಕ್ಷ ವಹಿವಾಟು ಮಾಡುತ್ತಿವೆ. ಇದು ಸಂಘಟಿತ ಶ್ರಮದ ಶಕ್ತಿ. ಸ್ಥಳೀಯ ಸಂಘ ಸಂಸ್ಥೆಗಳು ತಯಾರಿಸುವ ಉತ್ಪನ್ನಗಳು ವಿದೇಶದಲ್ಲಿ ಮಾರಾಟವಾದರೆ ಆರ್ಥಿಕತೆಗೆ ಶಕ್ತಿ ಬರುತ್ತದೆ’ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಕೃಷಿ ಉತ್ಪಾದನೆಯಲ್ಲಿ ದೇಶವು ಗುರಿ ಮೀರಿ ಸಾಧನೆ ಮಾಡಿದೆ. ಶೇ 70ರಷ್ಟು ಖಾದ್ಯ ತೈಲವನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ಭಾರತ ಈಗ 9ನೇ ಸ್ಥಾನ ಪಡೆದಿದೆ’ ಎಂದು ವಿವರಿಸಿದರು.

ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ, ‘ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.