ADVERTISEMENT

ಬೆಂಗಳೂರು: ಶುಲ್ಕಕ್ಕಾಗಿ ಮೃತದೇಹ ಒತ್ತೆ; ಪಾಥ್‌ವೇ ಆಸ್ಪತ್ರೆ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 28 ಮೇ 2021, 11:52 IST
Last Updated 28 ಮೇ 2021, 11:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ₹ 3.67 ಲಕ್ಷ ಶುಲ್ಕ ಪಾವತಿಗಾಗಿ ಪಟ್ಟು ಹಿಡಿದು ಮೃತದೇಹವನ್ನು ಒತ್ತೆಯಾಗಿಟ್ಟುಕೊಂಡು ಸಂಬಂಧಿಕರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪದಡಿ ಚನ್ನಸಂದ್ರದ ಪಾಥ್‌ವೇ ಆಸ್ಪತ್ರೆ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮೃತದೇಹ ಒತ್ತೆಯಾಗಿಟ್ಟುಕೊಂಡಿದ್ದರ ವಿರುದ್ಧ ಇದು ರಾಜ್ಯದಲ್ಲೇ ಮೊದಲ ಪ್ರಕರಣವಾಗಿದೆ.

‘ಕೊರೊನಾ ಸೋಂಕಿತರಾಗಿದ್ದ ಲಕ್ಷ್ಮಿನಾರಾಯಣ (42) ಎಂಬುವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಚಿಕಿತ್ಸೆಗೆಂದು ₹ 4.50 ಲಕ್ಷ ಪಾವತಿಸಿದ್ದರು. ಆದರೆ, ಆಸ್ಪತ್ರೆಯವರು ಪುನಃ ₹ 3.67 ಲಕ್ಷ ಪಾವತಿಸುವಂತೆ ಪಟ್ಟು ಹಿಡಿದಿದ್ದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಶುಲ್ಕ ಪಾವತಿಸಿಯೇ ಮೃತದೇಹ ತೆಗೆದುಕೊಂಡು ಹೋಗಿ ಎಂದಿದ್ದ ಆಸ್ಪತ್ರೆಯವರು, ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದರು. ಇದರಿಂದ ನೊಂದ ಕುಟುಂಬಸ್ಥರು ರಾಜರಾಜೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಆಸ್ಪತ್ರೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಅಕ್ರಮ ಬಂಧನ (ಐಪಿಸಿ 342), ಅವಾಚ್ಯ ಶಬ್ದಗಳಿಂದ ನಿಂದನೆ (ಐಪಿಸಿ 504), ಜೀವ ಬೆದರಿಕೆ (ಐಪಿಸಿ 506), ಸರ್ಕಾರಿ ಅಧಿಕಾರಿ ಆದೇಶ ಪಾಲಿಸದ (ಐಪಿಸಿ 188) ಹಾಗೂ ಅಪರಾಧ ಸಂಚು (ಐಪಿಸಿ 34) ಆರೋಪಗಳು ಆಸ್ಪತ್ರೆ ಮೇಲಿವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.