ಬೆಂಗಳೂರು: ಪೊಲೀಗಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಮತ್ತು ನಿಂದನೀಯ ಭಾಷೆ ಬಳಸಿದ ಆರೋಪದಡಿ ತೆಲಂಗಾಣದ ನಿವಾಸಿಯೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವಾರಂಗಲ್ ಜಿಲ್ಲೆಯ ಹನುಮಕೊಂಡದ ಅನುಮಂದಲ ರಾಜೇಶ್ ರೆಡ್ಡಿ (33) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಅರ್ಜಿದಾರರ ವಿರುದ್ಧದ ಆರೋಪಗಳು ಅಸ್ಪಷ್ಟವಾಗಿವೆ. ಆರೋಪಿ ಬಳಸಿದ ನಿಂದನೀಯ ಭಾಷೆಯ ಸ್ವರೂಪವನ್ನು ದೂರಿನಲ್ಲಿ ವಿವರಿಸಲಾಗಿಲ್ಲ. ಆರೋಪಿ, ಕೇವಲ ನಿಂದನೀಯ ಭಾಷೆ ಬಳಸಿದ್ದಾರೆ ಎಂದ ಮಾತ್ರಕ್ಕೆ ಅದು, ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 504ರ ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಅಪರಾಧಕ್ಕೆ ಅನ್ವಯ ಆಗುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣವೇನು?:
‘ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜೇಶ್ ರೆಡ್ಡಿ ಅವರನ್ನು ಬಂಧಿಸಲು ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ್ ಮತ್ತು ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ರೆಡ್ಡಿ ಅವರು, ಪ್ರಕಾಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆ ನಡೆಸಲು ಯತ್ನಿಸಿಸುವ ಮೂಲಕ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ’ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.