ADVERTISEMENT

ಪಿಎಸ್‌ಐ ಮೇಲೆ ಮಚ್ಚಿನಿಂದ ಹಲ್ಲೆ: ರೌಡಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 21:19 IST
Last Updated 16 ನವೆಂಬರ್ 2021, 21:19 IST
ರೌಡಿ ರಘು 
ರೌಡಿ ರಘು    

ಬೆಂಗಳೂರು:ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಹೆಣ್ಣೂರು ಠಾಣೆಯ ಪಿಎಸ್ಐ ನಿಂಗರಾಜ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದ ರೌಡಿ ರಘು (30) ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.

‘ಕೆಲ ದಿನಗಳ ಹಿಂದೆ ನಾಗವಾರ ವರ್ತುಲ ರಸ್ತೆಯ ಸರ್ವಿಸ್ ರಸ್ತೆ ಬಳಿ ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಎಂಬುವರ ಹತ್ಯೆ ನಡೆದಿತ್ತು. ಈ ಸಂಬಂಧ ಆರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಿಳ್ಳಾರೆಡ್ಡಿ ನಗರದ ನಿವಾಸಿ ರಘು, ಕೃತ್ಯಕ್ಕೆ ಬಳಸಿದ್ದ ಮಚ್ಚನ್ನು ಕಸ್ತೂರಿನಗರದ ರೈಲ್ವೆ ಪ್ಯಾರಲ್‌ ರಸ್ತೆ ಬದಿಯ ಪೊದೆಯಲ್ಲಿ ಬಿಸಾಡಿದ್ದಾಗಿ ತಿಳಿಸಿದ್ದ. ಹೀಗಾಗಿ ಆತನನ್ನು ಮಂಗಳವಾರ ಬೆಳಿಗ್ಗೆ ವಾಹನದಲ್ಲಿ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪೊದೆ ಬಳಿ ಬಿಸಾಡಿದ್ದ ಮಚ್ಚು ಸಿಕ್ಕೊಡನೆಯೇ ಅದರಿಂದ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದ. ತಪ್ಪಿಸಿಕೊಳ್ಳಲೂ ಮುಂದಾಗಿದ್ದ. ಹೀಗಾಗಿ ಸ್ಥಳದಲ್ಲಿ ಇನ್‌ಸ್ಪೆಕ್ಟರ್‌ ವಸಂತ್‌ಕುಮಾರ್‌ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಶರಣಾಗುವಂತೆ ಸೂಚಿಸಿದ್ದರು. ಹೀಗಿದ್ದರೂ ಆತ ಪಿಎಸ್‌ಐ ಮೇಲೆ ಮತ್ತೆ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಆತನತ್ತ ಗುಂಡು ಹಾರಿಸಲಾಗಿತ್ತು. ಅದು ಆತನ ಬಲಗಾಲಿಗೆ ತಗುಲಿತ್ತು. ಸ್ಥಳದಲ್ಲೇ ಕುಸಿದುಬಿದ್ದ ಆತನನ್ನು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಎಸ್‌ಐ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT