ADVERTISEMENT

ಇಂದಿನಿಂದ ಕಿತ್ತೂರು ‘ವಿಜಯ ಉತ್ಸವ’; ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 16:34 IST
Last Updated 22 ಅಕ್ಟೋಬರ್ 2022, 16:34 IST
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ‘ಕಿತ್ತೂರು ಉತ್ಸವ’ ಅಂಗವಾಗಿ ಶನಿವಾರ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ‘ಕಿತ್ತೂರು ಉತ್ಸವ’ ಅಂಗವಾಗಿ ಶನಿವಾರ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಆಚರಿಸಲು ನಿರ್ಧರಿಸಿರುವ ಕಿತ್ತೂರು ಉತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ. ಅ. 23, 24 ಹಾಗೂ 25ರಂದು ರಾಣಿ ಚನ್ನಮ್ಮನ ಕರ್ಮಭೂಮಿಯಲ್ಲಿ ‘ವಿಜಯ ವೈಭವ’ ಮನೆ ಮಾಡಲಿದೆ.

1824ರ ಅಕ್ಟೋಬರ್‌ 23ರಂದು ಕಿತ್ತೂರು ಸೈನ್ಯವು ಬ್ರಿಟಿಷ್‌ ಸೈನ್ಯದ ವಿರುದ್ಧ ಸಾಧಿಸಿದ ವಿಜಯದ ನೆನಪಿನ ಉತ್ಸವವಿದು. 198 ವರ್ಷಗಳ ನಂತರ ಇದಕ್ಕೆ ರಾಜ್ಯಮಟ್ಟದ ಮಾನ್ಯತೆ ಸಿಕ್ಕಿದೆ. ಕಿತ್ತೂರು ಕರ್ನಾಟಕ ಭಾಗದ ಜನರ ಭಾವನಾತ್ಮಕ,ಸ್ವಾಭಿಮಾನದ ಪ್ರತೀಕವಾದ ಉತ್ಸವ ನಡೆಯುತ್ತಿದೆ.

ರಾಣಿ ಚನ್ನಮ್ಮ ವೇದಿಕೆಯಲ್ಲಿ ಮುಖ್ಯ ಕಾರ್ಯಕ್ರಮ, ರಾಜಾ ಮಲ್ಲಸರ್ಜ ವೇದಿಕೆ ಹಾಗೂ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಲಾಗಿದೆ. ಮಳೆಯಿಂದ ತೊಂದರೆಯಾಗದಂತೆ ಶಾಮಿಯಾನ ಹಾಕಲಾಗಿದೆ.

ADVERTISEMENT

ಭಾನುವಾರ ಬೆಳಿಗ್ಗೆ 10.30ಕ್ಕೆ ಆನೆಯ ಮೇಲೆ ಚನ್ನಮ್ಮನ ವೀರಜ್ಯೋತಿ ಯಾತ್ರೆ, ಕುದುರೆಗಳ ಸಾಲು, ವಾದ್ಯಮೇಳಗಳ ಸಮೇತ ರೂಪಕಗಳ ಮೆರವಣಿಗೆ ನಡೆಯಲಿದೆ. ಶನಿವಾರವೇ ಹಲವು ಕಲಾತಂಡಗಳು ಮೇಳೈಸಿವೆ. ಫಲ–ಪುಷ್ಪ ಪ್ರದರ್ಶನ, ಕೈಗಾರಿಕಾ ವಸ್ತು ಪ್ರದರ್ಶನ, ಐತಿಹಾಸಿಕ ವಸ್ತು ‍ಪ್ರದರ್ಶನ, ಶ್ವಾನಗಳ ಪ್ರದರ್ಶನ ಈ ಬಾರಿಯ ಆಕರ್ಷಣೆ. ಸಂಜೆ 7ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು. ಅ.24ರಂದು ‘ಮಹಿಳಾ ಉತ್ಸವ’ ಆಚರಿಸಲಾಗುವುದು. ಸಮಾನಾಂತರ ವೇದಿಕೆಗಳಲ್ಲಿ ಪ್ರತಿ ದಿನ 40 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.