ADVERTISEMENT

‘ಸಂಚಾರಿ ಮೇವು ಬ್ಯಾಂಕ್‌’ ರಾಜ್ಯದಲ್ಲೇ ಪ್ರಥಮ

ಜಗಳೂರಿನಲ್ಲಿ ರೈತರ ಮನೆಗೇ ಮೇವು

ಬಾಲಕೃಷ್ಣ ಪಿ.ಎಚ್‌
Published 12 ಜುಲೈ 2019, 9:51 IST
Last Updated 12 ಜುಲೈ 2019, 9:51 IST
ಹುಲ್ಲುಮನಿ ತಿಮ್ಮಣ್ಣ
ಹುಲ್ಲುಮನಿ ತಿಮ್ಮಣ್ಣ   

ದಾವಣಗೆರೆ: ಮೇವಿಗಾಗಿ ಗೋಶಾಲೆಗೆ ರೈತರು ಜಾನುವಾರನ್ನು ಹೊಡುಕಿಕೊಂಡು ಬರಬೇಕು. ಅದರ ಬದಲು ರೈತರ ಮನೆಬಾಗಿಲಿಗೇ ಮೇವು ತೆಗೆದುಕೊಂಡು ಹೋಗಿ ಕೊಡುವ ‘ಸಂಚಾರಿ ಮೇವು ಬ್ಯಾಂಕ್‌’ ಜಗಳೂರು ತಾಲ್ಲೂಕಿನಲ್ಲಿ ಆರಂಭವಾಗಿದೆ.

ಒಂದು ಕೆ.ಜಿ. ಒಣ ಮೇವಿಗೆ ರೈತರು ₹ 2 ಪಾವತಿಸಬೇಕು. ಒಂದು ಜಾನುವಾರಿಗೆ ಗರಿಷ್ಠ ₹ 70 ಮೌಲ್ಯದ ಮೇವು ಖರೀದಿಸಲು ಅವಕಾಶ ನೀಡಲಾಗಿದೆ. ತಾಲ್ಲೂಕಿನ ಕೊಣಚಕಲ್ಲು ಮತ್ತು ಮಡ್ಡರಹಳ್ಳಿಯಲ್ಲಿ (ಗುರುಸಿದ್ದಪುರ) ಎರಡು ತಿಂಗಳ ಹಿಂದೆ ಗೋಶಾಲೆ ಆರಂಭಿಸಲಾಗಿತ್ತು. ಬೇಡಿಕೆ ಹೆಚ್ಚಾಗಿದ್ದರಿಂದ ಹಿರೇಮಲ್ಲನಹೊಳೆಯಲ್ಲಿಯೂ ಗೋಶಾಲೆ ಆರಂಭಿಸಲಾಗಿದೆ. ಆದರೆ ಗೋಶಾಲೆಯಿಂದ 10– 15 ಕಿಲೋಮೀಟರ್‌ ದೂರ ಇರುವ ಹಳ್ಳಿಗಳಿಂದ ಬರಲು ರೈತರಿಗೆ ಕಷ್ಟವಾಗುತ್ತಿದೆ. ಅವರಿಗೆ ಈ ಮೊಬೈಲ್‌ ಮೇವು ಬ್ಯಾಂಕ್‌ನಿಂದ ಉಪಯೋಗವಾಗಲಿದೆ.

‘ಜಿಲ್ಲಾ ಮಟ್ಟದ ಅಧಿಕಾರಿಗಳು 15 ದಿನಗಳ ಹಿಂದೆ ಜಗಳೂರು ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಜನರಿಗೆ ಕುಡಿಯುವ ನೀರಿನ ಕೊರತೆ ಆಗಬಾರದು. ಜಾನುವಾರಿಗೆ ಮೇವು ಕೊರತೆ ಆಗಬಾರದು. ಅದಕ್ಕೆ ಯಾವ ರೀತಿಯ ಯೋಜನೆಯಾದರೂ ಸರಿ ನೀವೇ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಈ ಯೋಜನೆ ರೂಪಿಸಿದ್ದೇನೆ. ಜುಲೈ 9ರಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಲಾಗಿದ್ದು, ಜುಲೈ 10ರಿಂದ ಯೋಜನೆ ಜಾರಿಗೆ ಬಂದಿದೆ’ ಎಂದು ಜಗಳೂರು ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಗೋಶಾಲೆಗಳಿಂದ ದೂರ ಇರುವ, ಮೇವಿನ ಕೊರತೆ ಇರುವ ಹಳ್ಳಿಗಳನ್ನು ಗುರುತಿಸಲಾಗಿದೆ. ತಾರೇಹಳ್ಳಿ, ಮರಿಕುಂಟೆ, ನರಸಿಂಹರಾಜಪುರ, ನರೇನಹಳ್ಳಿ, ಬಿಸ್ತುವಳ್ಳಿ, ಚಿಕ್ಕಮಲ್ಲನಹೊಳೆ, ಕಲ್ಲೇದೇವರಪುರ, ಮಠದದ್ಯಾಮನಹಳ್ಳಿ, ಬ್ಯಾಟಗಾರನಹಳ್ಳಿ, ಲಕ್ಕಂಪುರ, ಹನುಮಂತಪುರ, ಹನುಮಂತಪುರ ಗೊಲ್ಲರಹಟ್ಟಿ, ಕಸವನಹಳ್ಳಿ, ಕಸವನಹಳ್ಳಿ ಕೊರಚರಹಟ್ಟಿ, ಗೌಡಿಕಟ್ಟೆ, ಕೊರಟಕೆರೆ, ಉಜ್ಜಪ್ಪ ವಡೇರಹಳ್ಳಿ, ಅಗಸನಹಳ್ಳಿ ಗ್ರಾಮಗಳಲ್ಲಿ ತೀವ್ರ ಕೊರತೆ ಇರುವುದಾಗಿ ಅಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರು ಮಾಹಿತಿ ನೀಡಿದ್ದರು. ಅದರಂತೆ ಈ 19 ಹಳ್ಳಿಗಳಲ್ಲಿ ಮೇವು ಬೇಕಾಗಿರುವ ರೈತರ ಪಟ್ಟಿ ಮಾಡಲು ಗ್ರಾಮ ಕರಣಿಕರಿಗೆ ತಿಳಿಸಿದ್ದೇನೆ’ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ 50 ಸಾವಿರಕ್ಕಿಂತ ಅಧಿಕ ಜಾನುವಾರುಗಳಿವೆ. ಮೂರು ಗೋಶಾಲೆಗಳ ಮೂಲಕ ಸುಮಾರು 12 ಸಾವಿರ ಗೋವುಗಳಿಗೆ ಮೇವು ಒದಗಿಸಲಾಗಿದೆ. ಈಗ ಮೊಬೈಲ್‌ ಮೇವು ಬ್ಯಾಂಕ್‌ ಮೂಲಕ ಇನ್ನೂ 10 ಸಾವಿರ ಗೋವುಗಳಿಗೆ ಮೇವು ಒದಗಿಸಿದಂತಾಗುತ್ತದೆ. ಈ ಯೋಜನೆ ಯಶಸ್ವಿಯಾದರೆ ರಾಜ್ಯಕ್ಕೆ ಮಾದರಿಯಾಗಲಿದೆ ಎನ್ನುತ್ತಾರೆ ಅವರು.

ಗೋಶಾಲೆಯಲ್ಲಿ ಉಚಿತವಾಗಿ ಮೇವು ಸಿಗುತ್ತದೆಯಾದರೂ ಅಲ್ಲಿಗೆ ದೂರದೂರಿನಿಂದ ಜಾನುವಾರು ತರಲು ವೆಚ್ಚ ತಗಲುತ್ತದೆ. ಹಾಗಾಗಿ ಮೇವು ಕೆ.ಜಿ.ಗೆ ₹ 2 ನೀಡುವುದು ದುಬಾರಿಯಲ್ಲ ಎನ್ನುವುದು ಹನುಮಂತಪುರದ ರೈತ ಡಿ. ವೆಂಕಟೇಶ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.