ADVERTISEMENT

ಅರಣ್ಯ ಸಾಗುವಳಿ: 2.55 ಲಕ್ಷ ಅರ್ಜಿತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:43 IST
Last Updated 27 ಮೇ 2025, 16:43 IST

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರ ಬಳಿ ಹಸಿರಿನಿಂದ ಕೊಂಗೊಳಿಸಿದ ಅರಣ್ಯ ಪ್ರದೇಶ

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರ ಬಳಿ ಹಸಿರಿನಿಂದ ಕೊಂಗೊಳಿಸಿದ ಅರಣ್ಯ ಪ್ರದೇಶ

ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆ ಅಡಿ ಭೂ ಮಂಜೂರಾತಿ ಕೋರಿ ಸಲ್ಲಿಕೆಯಾಗಿದ್ದ 2.71 ಲಕ್ಷ ಅರ್ಜಿಗಳಲ್ಲಿ 2.55 ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪಾರಂಪರಿಕ ಅರಣ್ಯವಾಸಿಗಳು ಮತ್ತು ಬುಡಕಟ್ಟು ಸಮುದಾಯದ ಜನರ ಜೀವನಕ್ಕೆ ಆಧಾರವಾಗಿರುವ ಅರಣ್ಯ ಭೂಮಿಯ ಒಡೆತನ ನೀಡಲು ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿದೆ. ಆದರೆ, ನಿಯಮದಂತೆ ಅಗತ್ಯ ದಾಖಲೆಗಳನ್ನು ಅರ್ಜಿದಾರರು ನೀಡಿಲ್ಲ. 16,685 ಅರ್ಜಿಗಳಿಗೆ ಸಾಗುವಳಿ ಹಕ್ಕು ನೀಡಲಾಗಿದೆ. ಉಳಿದ ಶೇ 95ರಷ್ಟು ಅರ್ಜಿ ತಿರಸ್ಕೃತವಾಗಿವೆ ಎಂದರು.

ತಿರಸ್ಕೃತವಾದ ಅರ್ಜಿದಾರರು ಸಾಗುವಳಿ ಮಾಡಿರುವ 3 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ಮರು ವಶಕ್ಕೆ ಪಡೆದಿಲ್ಲ. ದಾಖಲೆ ಸಲ್ಲಿಸಲು ಅವರಿಗೆ ಮತ್ತೊಮ್ಮೆ ಅವಕಾಶ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.

ರಾಜ್ಯದಲ್ಲಿ 40 ಸಾವಿರ ಚದರ ಕಿ.ಮೀ ಅರಣ್ಯವಿದೆ. 2.15 ಲಕ್ಷ ಎಕರೆ ಒತ್ತುವರಿಯಾಗಿದೆ. ಒತ್ತುವರಿ ಜತೆಗೆ ಖಾಸಗಿ ಭೂಮಿ ಖರೀದಿಸಿ ಅರಣ್ಯ ಪ್ರದೇಶ ವಿಸ್ತರಣೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಆ ಮೂಲಕ ಶೇ 33ರಷ್ಟು ಅರಣ್ಯ ಪ್ರದೇಶ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ ಸುಮಾರು 8.5 ಕೋಟಿ ಸಸಿಗಳನ್ನು ನೆಟ್ಟು, ಪೋಷಿಸಲಾಗಿದೆ. 1,20,975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದರು.

ಜಿಲ್ಲಾಮಟ್ಟದ ಸಮಿತಿಗಳ ಶಿಫಾರಸಿನಂತೆ 3,30,186.93 ಹೆಕ್ಟೇರ್‌ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಅಧಿಸೂಚಿಸಲಾಗಿದೆ. ಗುರುತಿಸಿರುವ ಭೂಮಿಯಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಪಟ್ಟಾ ಜಮೀನು ಇರುವ ಕಾರಣ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿದ್ದು, ಸಮಿತಿ ರಚಿಸಿ, ಪರಿಷ್ಕರಣೆ ಮಾಡಲಾಗುವುದು. ಕೈಬಿಡುವ ಪ್ರದೇಶಕ್ಕೆ ಪರ್ಯಾಯವಾಗಿ ಬೇರೆ ಜಮೀನು ನೀಡಲಾಗುವುದು. ಪರಿಭಾವಿತ ಪ್ರದೇಶದ ವ್ಯಾಪ್ತಿಯನ್ನು ಈಗಿರುವಂತೆಯೇ ಉಳಿಸಲಾಗುವುದು ಎಂದು ಹೇಳಿದರು.

ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜುಂ ಪರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ  ಉಪಸ್ಥಿತರಿದ್ದರು.

ಅರಣ್ಯ ಇಲಾಖೆ ವಶದಲ್ಲಿರುವ 2,748 ಆನೆದಂತ, ಹುಲಿ ಉಗುರು, ವನ್ಯಜೀವಿ ಪಳೆಯುಳಿಕೆಗಳನ್ನು ನಾಶ ಮಾಡಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ ತಕ್ಷಣ ನಾಶಪಡಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಗರುಡಾಕ್ಷಿ– ಆನ್‌ಲೈನ್‌ ಎಫ್‌ಐಆರ್‌ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಚಿವ ಖಂಡ್ರೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.