ADVERTISEMENT

ಅರಣ್ಯ ಪ್ರದೇಶದಲ್ಲಿ ಜನವಸತಿ; ಸಂಕಷ್ಟ ಪರಿಹಾರಕ್ಕೆ ಕೇಂದ್ರ, SCಗೆ ಮೊರೆ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:30 IST
Last Updated 3 ಜುಲೈ 2025, 23:30 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಹಲವು ದಶಕಗಳಿಂದ ಇರುವ ಜನವಸತಿ ಪ್ರದೇಶಗಳಿಗೆ ಪರಿಹಾರಾತ್ಮಕವಾಗಿ ಪರ್ಯಾಯ ಭೂಮಿ ಪಡೆದು, ಬಡ ಜನರ ಸಂಕಷ್ಟ ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಮೊರೆ ಹೋಗಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.

ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌, ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಜನಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸೆಕ್ಷನ್‌ 4 ಮತ್ತು ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಸಮಸ್ಯೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಕಂದಾಯ ಇಲಾಖೆ ಸಹಕಾರದೊಂದಿಗೆ ಮಾರ್ಗೋಪಾಯ ಹುಡುಕುತ್ತಿದೆ ಎಂದು ಅವರು ಹೇಳಿದರು.

ADVERTISEMENT

ಜನವಸತಿ ಪ್ರದೇಶ, ಸರ್ಕಾರಿ ಕಟ್ಟಡ, ಅಂಗನವಾಡಿ, ಖಾಸಗಿ ಪಟ್ಟಾ ಭೂಮಿಯನ್ನೂ ಪರಿಭಾವಿತ ಅರಣ್ಯದ ಪಟ್ಟಿಯಲ್ಲಿ ಸೇರಿಸಿ 2022 ರಲ್ಲಿ ಎರಡನೇ ಬಾರಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಈಗ ನ್ಯಾಯಾಲಯವು ಕೊನೆಯ ಅವಕಾಶ ನೀಡಿದೆ. ಸಮರ್ಪಕವಾಗಿ ಜಂಟಿ ಸರ್ವೇ ನಡೆಸಿ ಪ್ರಮಾಣಪತ್ರ ಸಲ್ಲಿಸಿದರೆ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಸೆಕ್ಷನ್‌ 4 ಅಧಿಸೂಚನೆ ಆಗಿದ್ದರೂ ಸೆಕ್ಷನ್‌ 17 ಆಗದೇ ಇರುವ ಪ್ರಕರಣಗಳು ದಶಕಗಳಿಂದ ಬಾಕಿ ಉಳಿದಿದ್ದು, ವ್ಯವಸ್ಥಾಪನಾಧಿಕಾರಿ (ಎಫ್‌.ಎಸ್‌.ಓ) ಗಳು ಇದನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು. ಜನವಸತಿ, ಕೃಷಿ ಜಮೀನು ಇಲ್ಲದ ವಿಭಾಗಗಳನ್ನು ಕೂಡಲೇ ಸೆಕ್ಷನ್ 17 ಕ್ಕೆ ಪರಿವರ್ತಿಸಿ ಅರಣ್ಯ ಎಂದು ಘೋಷಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.