ADVERTISEMENT

ಕಲ್ಲಿನಿಂದ ಹೊಡೆದು ಚಾಲಕನ ಕೊಲೆ ನನ್ನನ್ನು ದಿಗ್ಭ್ರಾಂತನನ್ನಾಗಿಸಿದೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 6:50 IST
Last Updated 17 ಏಪ್ರಿಲ್ 2021, 6:50 IST
   

ಬೆಂಗಳೂರು: ಮುಷ್ಕರ ಲೆಕ್ಕಿಸದೇ, ಜನರ ಸೇವೆಗಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್ ಚಾಲಕ ನಬಿ ರಸೂಲ್ ಆವಟಿ ಅವರನ್ನು ಜಮಖಂಡಿಯಲ್ಲಿ ಕಲ್ಲಿನಿಂದ ಹೊಡೆದು ಕೊಂದ ಘಟನೆ ನನ್ನನ್ನು ದಿಗ್ಭ್ರಾಂತನನ್ನಾಗಿಸಿದೆ. ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ ? ಎಂಬ ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಕಾಡಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ದುರ್ಘಟನೆ ಯಾವ ಸಂದೇಶ ನೀಡುತ್ತಿದೆ ಎಂಬುದರತ್ತ ಸರ್ಕಾರ ಗಂಭೀರವಾಗಿ ಯೋಚಿಸಲಿ. ಅನಿವಾರ್ಯ ಸಂದರ್ಭದಲ್ಲಿ ಜನರಿಗೆ ಸೇವೆ ನೀಡಲು ಇನ್ನು ಮುಂದೆ ಯಾವ ನೌಕರ ಮುಂದೆ ಬರುತ್ತಾರೆ ಎಂಬುದರ ಚಿಂತನೆ ಮಾಡಲಿ. ಮುಷ್ಕರವನ್ನು ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟ ಸರ್ಕಾರದ ನಡೆಯಲ್ಲಿ ಬೇಜವಾಬ್ದಾರಿತನ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಮಖಂಡಿ ದುರ್ಘಟನೆಯಲ್ಲಿ ಮೃತಪಟ್ಟ ಚಾಲಕ ನಬಿ ರಸೂಲ್ ಸರ್ಕಾರದ ಕರೆಗೆ ಓಗೊಟ್ಟು ಕರ್ತವ್ಯಕ್ಕೆ ಬಂದಿದ್ದವರು. ಹೀಗಾಗಿ ಅವರ ಕುಟುಂಬಕ್ಕೆ ಸರ್ಕಾರ ಗರಿಷ್ಠ ಪರಿಹಾರ ಒದಗಿಸಬೇಕು. ಕೃತ್ಯವೆಸಗಿದವರಿಗೆ ಶಿಕ್ಷೆ ಕೊಡಿಸಬೇಕು. ನೌಕರರ ಬೇಡಿಕೆ ಒಂದು ಕಡೆ ಇರಲಿ. ಅದಕ್ಕೂ ಮೊದಲು ನೌಕರರಲ್ಲೂ ಈಗ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದಿದ್ಧಾರೆ.

ADVERTISEMENT

ಬಸ್‌ಗಳ ಮೇಲೆ ದಾಳಿ ನಡೆಯುತ್ತಿರುವ ಪ್ರಸಂಗಗಳನ್ನು ಗಮನಿಸಿದ್ದೇನೆ. ಅಂಥವರನ್ನು ಕೂಡಲೇ ಬಂಧಿಸಬೇಕು. ನೌಕರರು ಈ ಕೃತ್ಯ ಮಾಡಿರಲಾರರು. ನೌಕರರ ಹೋರಾಟ ಸರ್ಕಾರದ ವಿರುದ್ಧವೇ ಹೊರತು, ಅನ್ನ ನೀಡುವ ಬಸ್‌ಗಳ ವಿರುದ್ಧ ಅಲ್ಲ ಎಂಬ ನಂಬಿಕೆ ನನಗಿದೆ. ಮುಷ್ಕರ ಹಿಂಸೆ ರೂಪ ಪಡೆಯಬಾರದು. ಇಲ್ಲಿ ಯಾರ ಹಠವೂ ಗೆಲ್ಲದಿರಲಿ. ನಾಗರಿಕರಿಗೆ ಹಿತವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.