ADVERTISEMENT

ಸಾರಿಗೆ ಸಿಬ್ಬಂದಿ ಮುಷ್ಕರ; ನಾಲ್ವರು ಅಮಾನತು

ವಾಟ್ಸ್‌ಆ್ಯಪ್‌ಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 19:10 IST
Last Updated 18 ಏಪ್ರಿಲ್ 2021, 19:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹುಬ್ಬಳ್ಳಿ: ಮುಷ್ಕರ ನಿರತ ಸಾರಿಗೆ ಸಂಸ್ಥೆ ಸಿಬ್ಬಂದಿ ಕರ್ತವ್ಯಕ್ಕೆ ಬರದಂತೆ ವಾಟ್ಸ್‌ಆ್ಯಪ್‌ನಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿದ ಆರೋಪದ ಮೇಲೆ ನಾಲ್ವರು ಸಿಬ್ಬಂದಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಮಾನತು ಮಾಡಿದೆ.

ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಸಹಾಯಕ ಲೆಕ್ಕಿಗ ಶ್ರೀಹರಿ ಮತ್ತು ಚಾಲಕ ಎಂ.ಕೆ. ಮದ್ನೂರ, ನವಲಗುಂದ ಘಟಕದ ಚಾಲಕ ದೇವರೆಡ್ಡಿ ಹೆಬಸೂರ ಮತ್ತು ನಿರ್ವಾಹಕ ಉಮೇಶ ಹಿರೇಮಠ ಅಮಾನತುಗೊಂಡಿರುವ
ಸಿಬ್ಬಂದಿ.

ಮುಷ್ಕರ ನಿರತ ಅನೇಕ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಕೊನೆಯ ಗಳಿಗೆಯಲ್ಲಿ ಹಿಂದೇಟು ಹಾಕಿದ್ದರು. ಅನುಮಾನ ಬಂದು ಕಾರಣ ಹುಡುಕಿದಾಗ ಸಂಸ್ಥೆಯ ಕೆಲ ಸಿಬ್ಬಂದಿ ಇದರ ಹಿಂದಿರುವ ಮಾಹಿತಿ ದೊರಕಿತ್ತು. ಜಾಡು ಹಿಡಿದು ಹೊರಟಾಗ ವಾಟ್ಸ್‌ಆ್ಯಪ್‌ನಲ್ಲಿ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗದಂತೆ ಪ್ರಚೋದನಕಾರಿ ಸಂದೇಶ ಕಳುಹಿಸುವ ಮಾಹಿತಿ ದೊರೆಯಿತು ಎಂದು ಹುಬ್ಬಳ್ಳಿ ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ಹೇಳಿದರು.

ADVERTISEMENT

ಸಂಸ್ಥೆಯ ಕೆಲ ಸಿಬ್ಬಂದಿ ವಾಟ್ಸ್‌ಆ್ಯಪ್‌ ಗ್ರುಪ್‌ ರಚಿಸಿಕೊಂಡಿದ್ದು, ಅದರಲ್ಲಿ ಶ್ರೀಹರಿ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ್ದ. ಅವುಗಳನ್ನು ಉಳಿದವರು ಮತ್ತೆ ಹಲವರಿಗೆ ಕಳುಹಿಸಿದ್ದಾರೆ. ಇದರಿಂದ ನಿಷ್ಠಾವಂತ ಸಿಬ್ಬಂದಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಕಾನೂನು ಬಾಹಿರ ಮುಷ್ಕರಕ್ಕೆ ಕುಮ್ಮಕ್ಕು ನೀಡಿರುವ ಕುರಿತು ಸಿಬ್ಬಂದಿ ಅಮಾನತುಗೊಳಿಸಲಾಗಿದೆ. ಹಾಗೂ ಇನ್ನೂ ಹಲವಾರು ವಾಟ್ಸ್‌ಆ್ಯಪ್‌ ಗುಂಪುಗಳಿದ್ದು, ಅವುಗಳಲ್ಲಿ ಬಹಳಷ್ಟು ಸಿಬ್ಬಂದಿ ಸಕ್ರಿಯವಾಗಿರುವುದು ತಿಳಿದು ಬಂದಿದೆ. ಇದರ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದರು.

ಬಸ್ಸಿಗೆ ಕಲ್ಲು ತೂರಾಟ: ಚಾಲಕನ ಕಣ್ಣಿಗೆ ಗಾಯ

ಹಿರೇಕೆರೂರ(ಹಾವೇರಿ): ತಾಲ್ಲೂಕಿನ ಗುಂಡಗಟ್ಟಿ ಕ್ರಾಸ್‌ ಸಮೀಪ ಭಾನುವಾರ ಅಪರಿಚಿತ ವ್ಯಕ್ತಿ ಕಲ್ಲು ತೂರಿದ್ದರಿಂದ ಮಾಸೂರು ಕಡೆಗೆ ಹೊರಟಿದ್ದ ಬಸ್‌ನ ಮುಂದಿನ ಗಾಜು ಒಡೆದಿದೆ. ಚಾಲಕ ಎಸ್.ಎಂ.ದೊಡ್ಡಮನಿ ಅವರ ಕಣ್ಣಿಗೆ ಗಾಜುಪುಡಿ ಸಿಡಿದು ಗಾಯಗೊಂಡಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಇಲ್ಲಿನ ಘಟಕ ವ್ಯವಸ್ಥಾಪಕ ಪ್ರಶಾಂತ ಪಿ. ತಿಳಿಸಿದ್ದಾರೆ.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸ್ಥಳೀಯ ಘಟಕದಲ್ಲಿ 28 ಚಾಲಕ ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಗ್ರಾಮೀಣ ಭಾಗಕ್ಕೆ ಬಸ್‌ ಸಂಚಾರ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.