ADVERTISEMENT

ಕನ್ನಡದ ಕೆಲಸಕ್ಕೂ ಅನುದಾನ ಕಡಿತ?

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 18:30 IST
Last Updated 4 ಫೆಬ್ರುವರಿ 2020, 18:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಜೆಟ್ ಪ್ರಸ್ತಾವ ಸಿದ್ಧಪಡಿಸುವಾಗ ಪ್ರಸಕ್ತ ಸಾಲಿನ ಬಜೆಟ್ ಮೊತ್ತಕ್ಕಿಂತ ಶೇ 30ರಷ್ಟು ಕಡಿತಗೊಳಿಸುವಂತೆ ಹಣಕಾಸು ಇಲಾಖೆ ಸೂಚನೆ ನೀಡಿದ್ದು, ಕನ್ನಡದ ಕೆಲಸಕ್ಕೂ ಆರ್ಥಿಕ ಸಂಕಷ್ಟ ಎದುರಾಗಿದೆ.

ಈಗಾಗಲೇ ಸಂಘ, ಸಂಸ್ಥೆಗಳು ಅನುದಾನ, ನೆರವು ಕೋರಿ ಅರ್ಜಿ ಸಲ್ಲಿಸಬಾರದು ಎಂಬ ಸೂಚನೆಯನ್ನು ಇಲಾಖೆ ಹೊರಡಿಸಿದೆ. ಮುಂದಿನ ಬಜೆಟ್‌ನಲ್ಲಿ ಮತ್ತಷ್ಟು ಕಡಿತ ಮಾಡಿದರೆ ನಿರ್ವಹಣೆ ಕಷ್ಟಕರವಾಗಲಿದೆ ಎಂದು ಹೇಳಲಾಗುತ್ತಿದೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಇಲಾಖೆ ಸಚಿವ ಸಿ.ಟಿ.ರವಿ, ‘ಬಜೆಟ್ ಪ್ರಸ್ತಾವ ಸಿದ್ಧಪಡಿಸುವಾಗ ಶೇ 30ರಷ್ಟು ಕಡಿತಗೊಳಿಸುವಂತೆ ಹಣಕಾಸು ಇಲಾಖೆ ಹೇಳಿದೆ. ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗದಿರುವುದು, ಕೇಂದ್ರದಿಂದಲೂ ಅನುದಾನ ಬಾರದಿರುವುದು, ಅತಿವೃಷ್ಟಿ, ರೈತರ ಸಾಲ ಮನ್ನಾಗೆ ಹಣ ಹೊಂದಿಸಬೇಕಿದೆ. ಹಾಗಾಗಿ ಅನುದಾನ ಕಡಿತಕ್ಕೆ ಸಲಹೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಬಜೆಟ್ ಪೂರ್ವಭಾವಿಸಭೆಯಲ್ಲಿ ಅನುದಾನ ಕಡಿಮೆಮಾಡದಂತೆ ಮುಖ್ಯಮಂತ್ರಿ ಮನವೊಲಿಸಲಾಗುವುದು. ಅಗತ್ಯಬಿದ್ದರೆ ಸಾಹಿತಿಗಳು, ಕಲಾವಿದರ ನಿಯೋಗವನ್ನು ಮುಖ್ಯಮಂತ್ರಿ ಬಳಿಗೆ ಕರೆದೊಯ್ಯಲಾಗುವುದು ಎಂದರು.

ತನಿಖೆ: ‘ಹಿಂದಿನ ಸಚಿವ ಡಿ.ಕೆ.ಶಿವಕುಮಾರ್ ಅವಧಿಯಲ್ಲಿ ಕೆಲವು ಟ್ರಸ್ಟ್‌ಗಳನ್ನು ಲೆಟರ್‌ಹೆಡ್ ಟ್ರಸ್ಟ್‌ಗಳೆಂದು ಪರಿಗಣಿಸಿ ಅನುದಾನ ಕಡಿತಗೊಳಿಸಲಾಗಿತ್ತು. ಈ ಬಗ್ಗೆ ಸೋಷಿಯಲ್ ಆಡಿಟ್ ಮಾಡಿಸಲು ನಿರ್ಧರಿಸಲಾಗಿದೆ. ಇಲಾಖೆಯಲ್ಲಿ ನೋಂದಾಯಿಸಿಕೊಂಡ ಮೇಲೆ ಅನುದಾನ ಕೊಡದೇ ಇರುವುದು ಸರಿಯಲ್ಲ’ ಎಂದು ಹೇಳಿದರು.

ರಾಜ್ಯದಲ್ಲಿ 25 ಸಾವಿರ ಐತಿಹಾಸಿಕ ಕಟ್ಟಡಗಳಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮೂಲಕ ಸಂರಕ್ಷಣೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.