ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಬೆಂಗಳೂರು: ‘ಬಿಬಿಎಂಪಿ ಇನ್ನು ಮುಂದೆ ‘ಗ್ರೇಟರ್ ಬೆಂಗಳೂರು’ ಆಗಲಿದ್ದು, ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಗುರುವಾರದಿಂದ (ಮೇ 15) ಜಾರಿಗೆ ಬಂದಿದೆ. ಆ ಮೂಲಕ, ಬಿಬಿಎಂಪಿ ಬದಲು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ಮುಖ್ಯಮಂತ್ರಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
ಅಧಿಸೂಚನೆ: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 (ಕರ್ನಾಟಕ ಕಾಯ್ದೆ–2025 ಸಂಖ್ಯೆ 36) ಗುರುವಾರ ಜಾರಿಗೆ ಬಂದಿದೆ. ಹೊಸ ‘ಗ್ರೇಟರ್ ಬೆಂಗಳೂರು ಪ್ರದೇಶ’ವು ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಅನ್ವಯವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಗುರುವಾರ ಅಧಿಸೂಚನೆ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳ ರಚನೆಯಾಗುವವರೆಗೆ ಬೃಹತ್ ಬೆಂಗಳೂರು ಆಡಳಿತ ಕಾಯ್ದೆ, 2024 (ಕರ್ನಾಟಕ ಕಾಯ್ದೆ–2025 ಸಂಖ್ಯೆ 53) ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ಅಧಿಕಾರ ಮತ್ತು ಕರ್ತವ್ಯಗಳನ್ನು ಈಗಿರುವ ಆಡಳಿತ ವ್ಯವಸ್ಥೆಯೇ ಚಲಾಯಿಸುವುದನ್ನು ಮುಂದುವರಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.