ADVERTISEMENT

ಗಣಪತಿ ಆತ್ಮಹತ್ಯೆಯಲ್ಲಿ ಜಾರ್ಜ್‌ ಪಾತ್ರವಿಲ್ಲ

ಕೋರ್ಟ್‌ಗೆ ಬಿ ರಿ‍ಪೋರ್ಟ್‌ ಸಲ್ಲಿಸಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:50 IST
Last Updated 20 ನವೆಂಬರ್ 2019, 19:50 IST
ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್
ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್   

ಬೆಂಗಳೂರು: ’ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆಗೆ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್‌ (ಈಗ ಕಾಂಗ್ರೆಸ್‌ ಶಾಸಕ) ಅವರ ಪ್ರಚೋದನೆ ಇತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ’ ಎಂದು ತನಿಖೆ ನಡೆಸಿದ್ದ ಸಿಬಿಐ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

ಗಣಪತಿ ಆತ್ಮಹತ್ಯೆ ಪ್ರಕರಣ ಆಗ ತೀವ್ರ ವಿವಾದ ಸೃಷ್ಟಿಸಿತ್ತು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಜಾರ್ಜ್‌ ಅವರ ರಾಜೀನಾಮೆಗೂ ಕಾರಣವಾಗಿತ್ತು. ಆನಂತರ ತನಿಖೆ ಹೊಣೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಬಳಿಕ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಚೆನ್ನೈ ತಂಡ ಸಲ್ಲಿಸಿರುವ ‘ಬಿ’ ರಿಪೋರ್ಟ್‌ನಲ್ಲಿ, ಐಪಿಎಸ್‌ ಅಧಿಕಾರಿಗಳಾದ ಪ್ರಣಬ್‌ ಮೊಹಂತಿ ಹಾಗೂ ಪ್ರಸಾದ್‌ ಅವರ ಕೈವಾಡವೂ ಇದ್ದಂತಿಲ್ಲ ಎಂದೂ ಹೇಳಿದೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮೊದಲು ಗಣಪತಿ, ಜಾರ್ಜ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು. ಆತ್ಮಹತ್ಯೆಗೆ ಮೊದಲು ಸ್ಥಳೀಯ ಟಿ.ವಿ ಚಾನಲ್‌ಗೆ ಸಂದರ್ಶನ ನೀಡಿದ್ದರು.

ADVERTISEMENT

ಗಣಪತಿ ಮಾಡಿದ್ದ ಆರೋಪಗಳಿಗೂ ಜಾರ್ಜ್‌ಗೂ ಸಂಬಂಧವಿಲ್ಲ. 2008ರಲ್ಲಿ ನಡೆದಿರುವ ಘಟನೆಗಳನ್ನು ನೆಪವಾಗಿ ಇಟ್ಟುಕೊಂಡು ಜಾರ್ಜ್ ಕಿರುಕುಳ ಕೊಟ್ಟಿದ್ದಾರೆ ಎಂದು ನಂಬಲಿಕ್ಕೆ ಆಧಾರಗಳಿಲ್ಲ.ಎಂದು ಸಿಬಿಐ ತಿಳಿಸಿದೆ.

ಗಣಪತಿಯವರು ಸೇವೆಯಲ್ಲಿದ್ದ ಸಮಯದಲ್ಲಿ ಕರ್ತವ್ಯಲೋಪ ಎಸಗಿರುವ ಹಲವಾರು ನಿದರ್ಶನಗಳಿವೆ. ಆದರೆ, ಅದಕ್ಕೆ ಸಂಬಂಧಪಟ್ಟಂತೆ ಆಗಿಂದಾಗ್ಗೆ ಶಿಸ್ತು ಕ್ರಮಗಳನ್ನು ಸಂಬಂಧಪಟ್ಟವರು ಕೈಗೊಂಡಿದ್ದಾರೆ. ಇದ್ಯಾವುದು ಅವರ ವೃತ್ತಿ ಭವಿಷ್ಯ, ಬಡ್ತಿ ಅಥವಾ ಇನ್‌ಕ್ರಿಮೆಂಟ್‌ ಮೇಲೆ ಪರಿಣಾಮ ಬೀರಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.

ಜಾರ್ಜ್‌ ಮತ್ತು ಪೊಲೀಸ್‌ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎನ್ನಲಾದ ಅನೇಕ ಪ್ರಕರಣಗಳನ್ನು ಗಣಪತಿ ಪ್ರಸ್ತಾಪಿಸಿದ್ದಾರೆ. ಆದರೆ, ಅದ್ಯಾವುದಕ್ಕೂ ಪುರಾವೆಗಳಿಲ್ಲ ಎಂದೂ ತನಿಖಾ ದಳ ವರದಿಯಲ್ಲಿ ಉಲ್ಲೇಖಿಸಿದೆ. ಈಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಜಾರ್ಜ್‌ ಆರೋಪವ‌ನ್ನು ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.