ADVERTISEMENT

ಭದ್ರತೆ ಹಿಂಪಡೆದಿದ್ದಕ್ಕೆ ಗಿರಡ್ಡಿ ಕುಟುಂಬ ಆಕ್ಷೇಪ

ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದ ಗಿರಡ್ಡಿ ಪುತ್ರ ಅನ್ನದಾನಿ

ಇ.ಎಸ್.ಸುಧೀಂದ್ರ ಪ್ರಸಾದ್
Published 13 ಜುಲೈ 2018, 19:30 IST
Last Updated 13 ಜುಲೈ 2018, 19:30 IST
ಡಾ. ಗಿರಡ್ಡಿ ಗೋವಿಂದರಾಜ
ಡಾ. ಗಿರಡ್ಡಿ ಗೋವಿಂದರಾಜ   

ಧಾರವಾಡ: ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರ ಮನೆಗೆ ನೀಡಲಾಗಿದ್ದ ಭದ್ರತೆಯನ್ನು ಅವರ ನಿಧನ ನಂತರ ವಾಪಸ್‌ ಪಡೆದಿರುವುದಕ್ಕೆ ಕುಟುಂಬದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ನಂತರ ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳಿಗೆ ಪೊಲೀಸ್ ಭದ್ರತೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆ ಪ್ರಕಾರ ಗಿರಡ್ಡಿ ಅವರಿಗೂ ಭದ್ರತೆ ನೀಡಲಾಗಿತ್ತು.

ಮೇ 11ರಂದು ತೀವ್ರ ಹೃದಯಾಘಾತದಿಂದ ಡಾ.ಗಿರಡ್ಡಿ ತಮ್ಮ ಮನೆಯಲ್ಲೇ ಮೃತಪಟ್ಟಿದ್ದರು. ಅದಕ್ಕೂ ಮೊದಲು ಸಶಸ್ತ್ರ ಮೀಸಲುಪಡೆಯ ಪೊಲೀಸರು ಗಿರಡ್ಡಿ ಅವರ ಇಲ್ಲಿನ ನವೋದಯ ನಗರದಲ್ಲಿರುವ ಮನೆಗೆ ಭದ್ರತೆ ನೀಡುತ್ತಿದ್ದರು. ಈಗ, ಯಾವುದೇ ಸೂಚನೆ ನೀಡದೆ ಭದ್ರತೆ ಹಿಂಪಡೆದಿದ್ದರ ಕುರಿತು ಅವರ ಪತ್ನಿ ಸರೋಜಾ ಹಾಗೂ ಪುತ್ರ ಅನ್ನದಾನಿ ಗೋವಿಂದರಾಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪತ್ರ ಬರೆದಿರುವ ಅವರ ಪುತ್ರ ಅನ್ನದಾನಿ,‘ನಮ್ಮ ತಂದೆ ತಮ್ಮ ಜೀವಿತಾವಧಿಯ 79 ವರ್ಷಗಳಲ್ಲಿ 65 ವರ್ಷ ಕನ್ನಡ ಭಾಷೆಗಾಗಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಕನ್ನಡ ನಾಡು, ನುಡಿಗಾಗಿ ಇಷ್ಟೆಲ್ಲ ಸೇವೆ ಮಾಡಿದವರ ಮನೆಗೆ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನೀಡಲಾಗುವುದಿಲ್ಲವೆಂದರೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ನಾಚಿಕೆಯಾಗಬೇಕು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸರೋಜಾ,‘ಇಬ್ಬರು ಪುತ್ರರಲ್ಲಿ ಒಬ್ಬರು ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿರುತ್ತಾರೆ. ಮತ್ತೊಬ್ಬರು ಹುಬ್ಬಳ್ಳಿ ಧಾರವಾಡ ನಡುವಿನ ನವನಗರದಲ್ಲಿದ್ದಾರೆ. ಮನೆಯಲ್ಲಿ ನಾನೊಬ್ಬಳೇ ಇರುವುದರಿಂದ ಇನ್ನೂ ಮೂರರಿಂದ ನಾಲ್ಕು ತಿಂಗಳು ಭದ್ರತೆ ವಿಸ್ತರಿಸಬೇಕು ಎಂದು ಕೇಳಿಕೊಂಡೆ. ಆದರೆ ಅದನ್ನು ಆಯುಕ್ತರು ನಿರಾಕರಿಸಿದರು. ಡಾ. ಕಲಬುರ್ಗಿ ಅವರ ಮನೆಗೆ ಭದ್ರತೆಯನ್ನು ಮುಂದುವರಿಸಲಾಗಿದೆ. ನಾನು ಮನೆಯಲ್ಲಿ ಒಬ್ಬಳೇ ಇರುವುದರಿಂದ ನಮ್ಮ ಮನೆಗೂ ಭದ್ರತೆ ಮುಂದುವರಿಸಬೇಕಿತ್ತು’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ‘ಭದ್ರತೆ ನೀಡುವುದು ಶಿಷ್ಟಾಚಾರವಲ್ಲ. ಅದು ವ್ಯಕ್ತಿಗಿರುವ ಜೀವ ಬೆದರಿಕೆ ಹಾಗೂ ಅಪಾಯವನ್ನು ಅರಿತು ನೀಡುವಂತದ್ದು. ಡಾ. ಗಿರಡ್ಡಿ ಅವರಿಗೆ ಭದ್ರತೆಯನ್ನು ನೀಡಲಾಗಿತ್ತೇ ಹೊರತು, ಅವರ ಮನೆಗಲ್ಲ. ಡಾ. ಕಲಬುರ್ಗಿ ಅವರ ಹತ್ಯೆಯಾಗಿದೆ. ಆ ಪ್ರಕರಣ ಇಂದಿಗೂ ತನಿಖೆ ಹಂತದಲ್ಲಿದೆ. ಹೀಗಾಗಿ ಅವರ ಕುಟುಂಬಕ್ಕೆ ಭದ್ರತೆ ಮುಂದುವರಿಸಲಾಗಿದೆ. ಆದರೆ ಗಿರಡ್ಡಿ ಮನೆಯ ಪರಿಸ್ಥಿತಿಯೇ ಬೇರೆ’ ಎಂದರು.

***

ಧಾರವಾಡದಲ್ಲಿ ಇರುವವರಿಗೆ ಇಂಥ ಗತಿಯಾದರೆ, ಗದಗದ ಅಬ್ಬಿಗೇರಿಯಲ್ಲಿ ಒಬ್ಬನೇ ಇರುವ ನನ್ನಂಥವರ ಗತಿ ಏನು?
– ಅನ್ನದಾನಿ ಗೋವಿಂದರಾಜ, ಡಾ. ಗಿರಡ್ಡಿ ಗೋವಿಂದರಾಜ ಪುತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.