ADVERTISEMENT

‘ಆಡಾಡ್ತಾ ಆಯುಷ..’ ಓದಿದ್ದ ಗಿರೀಶ ಕಾರ್ನಾಡ

ಸಾಹಿತಿ ಗೌರೀಶ ಕಾಯ್ಕಿಣಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮಕ್ಕೆ ಬಂದಿದ್ದರು

ಎಂ.ಜಿ.ನಾಯ್ಕ
Published 10 ಜೂನ್ 2019, 14:03 IST
Last Updated 10 ಜೂನ್ 2019, 14:03 IST
   

ಕುಮಟಾ: ಸಾಹಿತಿ ಗೌರೀಶ ಕಾಯ್ಕಿಣಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮಕ್ಕೆ 2011ರಲ್ಲಿಗೋಕರ್ಣದ ಅವರ ಮನೆಗೆ ಗಿರೀಶ ಕಾರ್ನಾಡ್ ಬಂದಿದ್ದ ನೆನಪು, ಸಾಹಿತ್ಯ ವಲಯದಲ್ಲಿ ಇನ್ನು ಅಚ್ಚ ಹಸಿರಾಗಿ ಉಳಿದಿದೆ.

ಗೋಕರ್ಣದ ‘ಪರ್ಣಕುಟಿ ಬಳಗ’ವುಜಯಂತ ಕಾಯ್ಕಿಣಿ ಅವರ ಮನೆಯ ಮಹಡಿ ಮೇಲೆ 2012ರ ಮಾರ್ಚ್ 18ರಂದು ಮಧ್ಯಾಹ್ನ ಕಾರ್ಯಕ್ರಮ ಆಯೋಜಿಸಿತ್ತು. ಗಿರೀಶ ಕಾರ್ನಾಡ್ ಆಗ ತಾನೆ ಬಿಡುಗಡೆಗೆ ಸಿದ್ಧವಾಗುತ್ತಿದ್ದ ತಮ್ಮ ಆತ್ಮ ಕಥನ, ‘ಆಡಾಡ್ತಾ ಆಯುಷ’ದ ಆಯ್ದ ಕೆಲವು ಭಾಗಗಳನ್ನು ಓದಿದ್ದರು. ವಿದೇಶಕ್ಕೆ ಹೋಗುವ ಭಾರತೀಯರು ಅಲ್ಲಿ ಬಿಳಿ ಚರ್ಮಕ್ಕೆ ಮಾರು ಹೋಗುವ ಅವರ ಮನಸ್ಥಿತಿಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದರು.

‘ನಾನು ಮೊದಲ ಸಲ ವಿದೇಶಕ್ಕೆ ಹೋಗುವಾಗ ಇದ್ದ ಭಾರತ, ಇಂದಿನ ಗೋಕರ್ಣದ ರೀತಿ ಇರಲಿಲ್ಲ. ದೆಹಲಿಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಭೇಟಿಯಾದ ಪಿ.ವಿ.ನರಸಿಂಹ ರಾವ್ ಬಾಬರಿ ಮಸೀದಿ ಕೆಡವುವಾಗ ನಡೆದುಕೊಂಡ ರೀತಿಯ ಬಗ್ಗೆ ಆಡಿದ ಮಾತು, ಇಂದಿಗೂ ಮನಸ್ಸಿನಲ್ಲಿ ಬೇಸರ ಉಳಿಸಿದೆ. ಮುಂಬೈ ಗಲಭೆ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುವಂತೆ ಅವರು ಆಮಿಷವೊಡ್ಡುವ ರೀತಿಯಲ್ಲಿ ಕೇಳಿಕೊಂಡಿದ್ದು ಮತ್ತೂ ಬೇಸರದ ಸಂಗತಿಯಾಗಿತ್ತು’ ಎಂದಿದ್ದರು.

ADVERTISEMENT

‘ಜಪಾನ್ ದೇಶದಿಂದ ನನಗೆ ಆಹ್ವಾನ ಬಂದಿತ್ತು. ಅದರಲ್ಲಿ ಅವರು ಒದಗಿಸಿಗಿದ್ದ ವಿವಿಧ ಸೌಲಭ್ಯಗಳು ಅತಿ ಕಂಜೂಸುತನದ್ದಾಗಿದ್ದವು. ಒಂದು ಬಿಟ್ಟು ಇನ್ನೊಂದು ಸೌಲಭ್ಯ ಆಯ್ದುಕೊಳ್ಳೋಣ ಎಂದರೆ ಇನ್ನೊಂದು ಮತ್ತೂ ಕಡಿಮೆ ಗುಣಮಟ್ಟದ್ದು. ಆದರೆ, ಅವುಗಳ ಬಗ್ಗೆ ಅವರು ಹೇಳುಕೊಳ್ಳುವ ರೀತಿಗೆ ಎಂಥವರೂ ಸೋತು ಹೋಗಬೇಕು’ ಎಂದು ತಮ್ಮ ಆತ್ಮಕಥನದಲ್ಲಿ ಜಪಾನಿಯರ ವ್ಯಾವಹಾರಿಕ ಬುದ್ಧಿಯ ಬಗ್ಗೆ ಬರೆದದ್ದನ್ನೂಗಿರೀಶ ಕಾರ್ನಾಡ್ ಓದಿದ್ದರು.

‘ಕೆಲವರು ತಮ್ಮ ಆತ್ಮಕಥನದಲ್ಲಿ ತಮ್ಮನ್ನೇ ಸಜ್ಜನರಂತೆ ಬಿಂಬಿಸಿಕೊಳ್ಳುವುದು ಬೇಸರದ ಸಂಗತಿ’ ಎಂದೂ ಹೇಳಿದ್ದರು.

ಜಯಂತ ಕಾಯ್ಕಿಣಿ, ‘ಸಚಿನ್ ತೆಂಡೂಲ್ಕರ್ ಸೆಂಚುರಿ ಹೊಡೆಯುವುದನ್ನೇ ಕಾಯುತ್ತಿರುವಂತೆ ಗಿರೀಶ್ ಅವರ ಆಗಮನಕ್ಕೆ ಸಾಹಿತ್ಯಾಸಕ್ತರು ಇಲ್ಲಿ ಕಾದಿದ್ದರು’ ಎಂದಿದ್ದರು.

ಗೌರೀಶ ಕಾಯ್ಕಿಣಿ ಅವರ ಪತ್ಮಿ ಶಾಂತಾ ಕಾಯ್ಕಿಣಿ ಅವರು ಪತಿಯ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ಕೆಳಗೆ ಕೂತು ವೀಕ್ಷಿಸಿದ ಅಪರೂಪದ ಗಳಿಗೆಯೂ ಇದಾಗಿತ್ತು.

ಬಸಳೆ ಸೊಪ್ಪು, ಜೇನು ಉಡುಗೊರೆ!:ಬಂದಿದ್ದ ಎಲ್ಲ ಅತಿಥಿಗಳಿಗೆ ಕಾರ್ಯಕ್ರಮದ ನಂತರ ಜಯಂತ್ ಕಾಯ್ಕಿಣಿ ಅವರು ಗೋಕರ್ಣದ ಬಸಳೆ ಸೊಪ್ಪಿನ ಕಟ್ಟು ಹಾಗೂ ಜೇನು ತುಪ್ಪದ ಬಾಟಲಿಯನ್ನು ಉಡುಗೊರೆಯಾಗಿ ಕೊಟ್ಟಿದ್ದರು.ಸಾಹಿತಿಗಳಾದ ಡಾ.ರಹಮತ್ ತರಿಕೇರಿ, ಪ್ರಕಾಶಕ ರಮಾಕಾಂತ ಜೋಶಿ, ಎಚ್.ಎಸ್.ಅನುಪಮಾ, ವಿಷ್ಣು ನಾಯ್ಕ, ಆರ್.ಜಿ.ಗುಂದಿ, ಅರವಿಂದ ಕರ್ಕಿಕೋಡಿ, ವಿಠ್ಠಲ ಭಂಡಾರಿ, ಶ್ರೀನಿವಾಸ ನಾಯ್ಕ, ಕಿರಣ ಭಟ್ಟ ಮುಂತಾದವರುಪಾಲ್ಗೊಂಡಿದ್ದರು. ಪರ್ಣಕುಟಿ ಬಳಗದ ಡಾ.ವಿ.ಆರ್.ಮಲ್ಲನ್, ಪತ್ರಕರ್ತ ಶ್ರೀಧರ ಅಡಿ ಕಾರ್ಯಕ್ರಮ ಸಂಘಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.